ಮಳೆಗೆ ಹಾವೇರಿಯಲ್ಲಿ 1255 ಹೆಕ್ಟೇರ್‌ ಕೃಷಿ, 31 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ

KannadaprabhaNewsNetwork |  
Published : Jul 25, 2024, 01:18 AM IST
24ಎಚ್‌ವಿಆರ್‌1 | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಕಳೆದ ಎಂಟ್ಹತ್ತು ದಿನಗಳಿಂದ ಬೀಳುತ್ತಿರುವ ಮಳೆ ಹಾಗೂ ನದಿಗಳ ಪ್ರವಾಹ ಪರಿಸ್ಥಿತಿಯಿಂದ ಮುಂಗಾರು ಆರಂಭದಲ್ಲೇ 1255 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 31 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ.

ನಾರಾಯಣ ಹೆಗಡೆಹಾವೇರಿ: ಜಿಲ್ಲೆಯಲ್ಲಿ ಕಳೆದ ಎಂಟ್ಹತ್ತು ದಿನಗಳಿಂದ ಬೀಳುತ್ತಿರುವ ಮಳೆ ಹಾಗೂ ನದಿಗಳ ಪ್ರವಾಹ ಪರಿಸ್ಥಿತಿಯಿಂದ ಮುಂಗಾರು ಆರಂಭದಲ್ಲೇ 1255 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 31 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ.

ಹಲವು ದಿನಗಳ ಬಳಿಕ ಬುಧವಾರ ಜಿಲ್ಲೆಯಲ್ಲಿ ಬಿಸಿಲು ಮೂಡಿದ್ದು, ನದಿಗಳಲ್ಲಿ ನೀರಿನ ಹರಿವು ಕೂಡ ಇಳಿಕೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ಆದರೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿದ್ದ ಮಳೆ ಹಾಗೂ ತುಂಬಿ ಹರಿಯುತ್ತಿರುವ ನದಿಯಿಂದ ಆಗಿರುವ ಅವಾಂತರ ಮುಂದುವರಿದಿದೆ. ಮನೆಗಳು ಮಳೆಯಿಂದ ಉರುಳುತ್ತಲೇ ಇವೆ. ಬುಧವಾರ ಕೂಡ 84 ಮನೆ, 4 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.

ಜೂನ್‌ ತಿಂಗಳಲ್ಲಷ್ಟೇ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಹೊಡೆತಕ್ಕೆ ಕೊಳೆಯತೊಡಗಿವೆ. ತುಂಗಭದ್ರಾ, ವರದಾ, ಕುಮದ್ವತಿ, ಧರ್ಮಾ ನದಿಗಳಲ್ಲಿ ಕಳೆದ ಒಂದು ವಾರದಿಂದ ತುಂಬಿ ಹರಿಯುತ್ತಿದ್ದರಿಂದ ನದಿ ಪಾತ್ರದ ಹೊಲಗದ್ದೆಗಳು ಮುಳುಗಡೆಯಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. 665 ಹೆಕ್ಟೇರ್‌ ಮೆಕ್ಕೆಜೋಳ, 261 ಹೆಕ್ಟೇರ್‌ ಸೋಯಾಬಿನ್‌, 170 ಹೆಕ್ಟೇರ್‌ ಹತ್ತಿ, 20 ಹೆಕ್ಟೇರ್‌ ಹೆಸರು, 73 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹುರುಳಿ, ಅವರೆ ಸೇರಿದಂತೆ 1255 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇನ್ನೂ ಹಲವು ಗ್ರಾಮಗಳ ಹೊಲದಲ್ಲಿ ನದಿ ನೀರು ತುಂಬಿ ನಿಂತಿದೆ. ಇನ್ನೂ ಹೆಚ್ಚಿನ ಬೆಳೆ ಹಾನಿಯಾಗುವ ಸಾಧ್ಯತೆಯಿದೆ. ಬೆಳ್ಳುಳ್ಳಿ, ಬಾಳೆ ತೋಟ, ಹಾಗಲಕಾಯಿ, ಮೆಣಸಿನಕಾಯಿ, ಹೂಕೋಸು ಮುಂತಾದ 31 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು ಕೂಡ ಹಾಳಾಗಿದೆ.

ಈ ಸಲ ಮುಂಗಾರು ವಿಳಂಬವಾದರೂ ಕೆಲವು ದಿನಗಳಲ್ಲೇ ಸುರಿದ ಮಳೆ ಮಾಡಿದ ಅವಾಂತರದ ಪ್ರಮಾಣ ಮಾತ್ರ ಹೆಚ್ಚಿದೆ. ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆ ಮೇಲ್ಛಾವಣಿ ಕುಸಿದು ಮೂವರು, ಹಿರೇಕೆರೂರಿನಲ್ಲಿ ಮರ ಬಿದ್ದು ಇಬ್ಬರು ಸೇರಿದಂತೆ ಐದು ಜನರು ಮೃತಪಟ್ಟಿದ್ದರೆ, ನಾಲ್ವರು ಗಾಯಗೊಂಡಿದ್ದಾರೆ. ಎರಡು ಜಾನುವಾರು ಮೃತಪಟ್ಟಿವೆ.

ಮಳೆಯಿಂದ ಹಾನಿಗೀಡಾದ ಮನೆಗಳ ಸಂಖ್ಯೆ 610ಕ್ಕೆ ಏರಿಕೆಯಾಗಿದೆ. ಮಳೆಯಿಂದ ತೇವಗೊಂಡ ಗೋಡೆ, ಚಾವಣಿಗಳು ಬೀಳುತ್ತಲೇ ಇವೆ. ಬುಧವಾರ ಕೂಡ 2 ಮನೆ ಸಂಪೂರ್ಣ, ಒಂದು ಮನೆ ತೀವ್ರ ಹಾನಿ ಹಾಗೂ 81 ಮನೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ 610 ಮನೆಗಳಿಗೆ ಹಾನಿಯಾಗಿದೆ.

ಇಷ್ಟು ದಿನಗಳ ಕಾಲ ನಿರಂತರವಾಗಿ ಮಳೆಯಾಗುತ್ತಿದ್ದರೂ ವಾಡಿಕೆ ಮಳೆಯಾಗಿಲ್ಲ ಎನ್ನುವುದು ವಾಸ್ತವ. ಜೂನ್‌ ಆರಂಭದಿಂದ ಇಲ್ಲಿ ವರೆಗೆ ವಾಡಿಕೆ ಮಳೆ 247 ಮಿಮೀ ಪೈಕಿ ಬಿದ್ದಿರುವುದು 243 ಮಿಮೀ ಮಳೆ ಮಾತ್ರ.

ತೆರವಾಗದ ಸೇತುವೆ: ಕಳೆದ ನಾಲ್ಕಾರು ದಿನಗಳಿಂದ ಮುಳುಗಡೆಯಾಗಿರುವ ಹಾವೇರಿ ತಾಲೂಕಿನ ನಾಗನೂರು- ಕೂಡಲ, ಕರ್ಜಗಿ ಚಿಕ್ಕಮುಗದೂರು, ಸವಣೂರು ತಾಲೂಕಿನ ಕಳಸೂರು ಕೋಳೂರು, ಕೋಣನತಂಬಗಿ ಹಿರೇಮರಳಿಹಳ್ಳಿ ಸೇತುವೆ ಇನ್ನೂ ತೆರವಾಗಿಲ್ಲ. ಹಾನಗಲ್ಲ ತಾಲೂಕಿನ ಆಡೂರು, ಬಾಳಂಬೀಡ, ಕೂಡಲ, ರಾಣಿಬೆನ್ನೂರು ತಾಲೂಕಿನ ಹೊಳೆಅನ್ವೇರಿ, ಮುಷ್ಟೂರು, ಅಂತರವಳ್ಳಿ, ಹಿರೇಮಾಗನೂರು ಹಾಗೂ ರಟ್ಟೀಹಳ್ಳಿ ತಾಲೂಕಿನಿಂದ ಯಲಿವಾಳ ರಸ್ತೆ ಸಂಪರ್ಕ ಇನ್ನೂ ಆರಂಭವಾಗಿಲ್ಲ. ಮಳೆ ಇದೇ ರೀತಿ ಬಿಡುವು ನೀಡಿದಲ್ಲಿ ಗುರುವಾರ ಕಡಿತಗೊಂಡಿದ್ದ ರಸ್ತೆ ಸಂಪರ್ಕ ಪುನರ್ ಸ್ಥಾಪನೆಯಾಗುವ ನಿರೀಕ್ಷೆಯಿದೆ.

ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದೆ. ವರದಾ ಮತ್ತು ತುಂಗಭದ್ರಾ ನದಿ ಪಾತ್ರದ ಹೊಲಗಳಲ್ಲಿ ನೀರು ತುಂಬಿ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗುವ ಸಂಭವವಿದೆ. ಜಮೀನುಗಳಲ್ಲಿ ಮಳೆ ನೀರು ಇಳಿದ ಮೇಲೆ ನಿಖರವಾದ ಹಾನಿ ಎಷ್ಟು ಎಂಬುದು ಗೊತ್ತಾಗಲಿದೆ. ಮಳೆ ಹಾನಿ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!