ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಮನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ದಲಿತ ಮುಖಂಡ ಶಂಕನಪುರ ಶೇಖರ್ ಬುದ್ಧ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ಜು.21 ರಂದು ಅನ್ಯ ಸಮುದಾಯದ ಗುಂಪೊಂದು ದಲಿತರ ಬಡಾವಣೆಗೆ ನುಗ್ಗಿ ದೌರ್ಜನ್ಯ ಎಸಗಿರುವುದು ಖಂಡನೀಯ. ಕೈ ಕತ್ತರಿಸಿ ಕುಟುಂಬದ ಮೇಲೂ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ.
ವೈರ ಮುಡಿಯವರ ಪುತ್ರ ಅನಿಶ್ ಮೇಲೆ ಮಾರಕಾಸ್ತ್ರ ಹಲ್ಲೆ ನಡೆಸಿದ್ದಲ್ಲದೆ, ಆತನ ಮುಂಗೈಯನ್ನು ಕಡಿದು ಹಾಕಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ರೌಡಿ ಶೀಟರ್ ಆಗಿ ಗಡಿಪಾರಾಗಿದ್ದ ಹರ್ಷ ಅಲಿಯಾಸ್ ಕೈಮಾ ಎಂಬಾತ ತನ್ನ ಸಹಚರರ ಜತೆಗೂಡಿ ಹಲ್ಲೆ ನಡೆಸಿದ್ದಾನೆ. ದಲಿತರಾಮಯ್ಯ ಎಂದು ಕರೆಸಿಕೊಳ್ಳುವ ಸಿಎಂ ಈ ಘಟನೆ ಬಗ್ಗೆ ಕಠಿಣ ಕ್ರಮವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ವಕೀಲ ರಾಜೇಂದ್ರ ಮಾತನಾಡಿ, ಮಾಳವಾಳು ಗ್ರಾಮದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕನಕಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 1.19 ಸಾವಿರ ಮತದ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದರಲ್ಲಿ ದಲಿತರು ಹೆಚ್ಚು ಮತ ನೀಡಿದ್ದಾರೆ. ಆದರೀಗ, ದಲಿತರ ಕೈ ಕಡಿದಿರುವುದು ಎಷ್ಟರ ಮಟ್ಟಿಗೆ ಸರಿ. ಈ ಬಗ್ಗೆ ಡಿಕೆ ಶಿವಕುಮಾರ್ ಮೌನ ಸರಿಯಲ್ಲ, ಈ ಕೃತ್ಯದಲ್ಲಿ ಭಾಗಿಯಾಗುರುವ 7 ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.