ಕಾರವಾರ: ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆರೆಪೀಡಿತ ಪ್ರದೇಶದ 13 ಕುಟುಂಬಗಳನ್ನು ಎನ್‌ಡಿಆರ್‌ಎಫ್ ರಕ್ಷಣೆ ಮಾಡಿದ್ದು, ಹೊನ್ನಾವರ ತಾಲೂಕಿನ 2 ಕಾಳಜಿ ಕೇಂದ್ರಗಳಲ್ಲಿ 59 ಜನರು ಆಶ್ರಯ ಪಡೆದಿದ್ದಾರೆ.
ಎನ್‌ಡಿಆರ್‌ಎಫ್ ರಕ್ಷಣೆ ಮಾಡಿದ ಮಂಕಿ ಪಪಂ ವ್ಯಾಪ್ತಿಯ ಗುಂದ, ಚಿಟ್ಟಿಹಿತ್ಲ, ದೇವದಳ್ಳಿಯ ನೆರೆಪೀಡಿತ ಪ್ರದೇಶದಲ್ಲಿ ಗಣೇಶ ನಾಯ್ಕ, ಹೊನ್ನಪ್ಪ ನಾಯ್ಕ, ರಮೇಶ ನಾಯ್ಕ ಮತ್ತಿತರ 13 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳಿಗೆ ತೀವ್ರ ಹಾನಿ ಹಾಗೂ 4 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಹೊನ್ನಾವರ: ಪಟ್ಟಣದ ಕರ್ನಲ್ ಹಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಬಂಡೆ ಸಮೇತ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಕಳೆದ ಹತ್ತು ವರ್ಷದಿಂದ ಹೆದ್ದಾರಿ ಅಗಲೀಕರಣದ ಹೆಸರಿನಲ್ಲಿ ಗುಡ್ಡದ ಮಣ್ಣು ತೆರೆದಿದ್ದ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಜಿಲ್ಲೆಯಲ್ಲಿ ಪದೇ ಪದೇ ಗುಡ್ಡ ಕುಸಿತದ ಪ್ರಕರಣಗಳು ಮರುಕಳಿಸುತ್ತಿದೆ.
ಭಾನುವಾರ ಮುಂಜಾನೆಯಿಂದಲೇ ಮುಂಗಾರು ಮಳೆಯ ಆರ್ಭಟ ತಾಲೂಕಿನಲ್ಲಿ ಮುಂದುವರಿದಿದ್ದು, ಬೆಳಗ್ಗೆ 7.30ರ ಸುಮಾರಿಗೆ ಬೃಹತ್ ಬಂಡೆಗಲ್ಲು ಸಮೇತ ಮಣ್ಣು, ಮರಗಳು ಹೆದ್ದಾರಿಯ ಮೇಲೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಐಆರ್‌ಬಿ ಸಿಬ್ಬಂದಿ ಜೆಸಿಬಿ ಮೂಲಕ ಹೆದ್ದಾರಿ ಮೇಲೆ ಬಿದ್ದ ಮಣ್ಣು ತೆರವು ಮಾಡುವ ಕಾರ್ಯ ಕೈಗೊಂಡಿದ್ದಾರೆ.7ಎಚ್‌ಎನ್‌ಆರ್21ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿರುವುದು.