ಕನ್ನಡಪ್ರಭ ವಾರ್ತೆ ಧಾರವಾಡ
ತಾಲೂಕಿನ ಹಳೆ ತೇಗೂರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಪುನಶ್ಚೇತನಗೊಂಡ ಜೋಗಿ ಕೆರೆಗೆ ಬಾಗೀನ ಅರ್ಪಣೆ ಮತ್ತು ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದ ಸಾನಿಧ್ಯವನ್ನು ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಸಂತ್ ಅರ್ಕಾಚಾರ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಅದ್ಭುತವಾಗಿ ಕೆರೆ ನಿರ್ಮಾಣ ಮಾಡಲಾಗಿದೆ. ಮುಂಗಾರು ಮಳೆಯಿಂದ ಕೆರೆ ತುಂಬಿದೆ. ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡಿರುವುದು ಸಣ್ಣ ವಿಚಾರವಾದರೂ ಕೆರೆಯ ಸದೃಢತೆಗೆ ಸಹಾಯವಾಗಲಿದೆ ಎಂದರು.
ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ ಮಾತನಾಡಿ, ಜೋಗಿ ಕೆರೆಯ ಸುತ್ತಲೂ ಕೃಷಿ ಭೂಮಿ ಮತ್ತು ಗುಡ್ಡಗಳಿವೆ. ಕೆರೆ ನಿರ್ಮಾಣಕ್ಕೆ ಅಚ್ಚುಕಟ್ಟ ಜಾಗವಾಗಿದೆ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಸಸ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟಕ ಪ್ರದೀಪ್ ಶೆಟ್ಟಿ, ರಾಜ್ಯಾದ್ಯಂತ ಈಗಾಗಲೇ ಸುಮಾರು 750 ಕೆರೆಗಳ ಪುನಶ್ಚೇತನಗೊಳಿಸಲಾಗಿದೆ. ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಕ್ಷೇತ್ರ ತನ್ನದೇ ಆದ ಕೊಡುಗೆಗಳನ್ನು ನೀಡಲು ಸದಾ ಮುಂದಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪುಂಡಲೀಕ ಹಡಪದ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಕಮತರ, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಬೆಳವಲದ, ಸದಸ್ಯರಾದ ಮಾರುತಿ ಬಂಡಿವಡ್ಡರ, ಈರಯ್ಯ ಹಿರೇಮಠ, ಮಂಜುಳಾ ಜೋಗಿ, ಸಿದ್ದಲಿಂಗವ್ವ ಗುಡದರಿ, ತಾಲೂಕು ಯೋಜನಾಧಿಕಾರಿ ಮಯೂರ್ ತೋರಸ್ಕರ, ಅಭಿಯಂತರ ನಿಂಗರಾಜ್ ಮಾಳವಾಡ, ಉಪವಲಯ ಅರಣ್ಯ ಅಧಿಕಾರಿ ಚಂದ್ರಶೇಖರ್ ರೊಟ್ಟಿ, ಜ್ಞಾನ ವಿಕಾಸ ಸನ್ಮಯ ಅಧಿಕಾರಿ ವಿಜಯಲಕ್ಷ್ಮೀ ಇದ್ದರು.