ಹರಿಹರ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಸದಸ್ಯರು ನಗರಸಭೆ ಎಇಇ ವಿನಯ್ ಹಾಗೂ ಹರಿಹರ ಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

- ಬೈಕ್‌ ಕಳವು, ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆ: ಜಯಕರ್ನಾಟಕ ಸಂಘಟನೆ ಸದಸ್ಯರ ಆರೋಪ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಸದಸ್ಯರು ನಗರಸಭೆ ಎಇಇ ವಿನಯ್ ಹಾಗೂ ಹರಿಹರ ಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸಂಘಟನೆ ಸದಸ್ಯರು, ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳು, ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳೇ ಇಲ್ಲ. ಇದರಿಂದ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ತುಂಗಭದ್ರಾ ಸೇತುವೆ ಮೇಲೆ ಲಕ್ಷಾಂತರ ರು. ಖರ್ಚು ಮಾಡಿ ಬೀದಿದೀಪದ ವ್ಯವಸ್ಥೆ ಮಾಡಿದ್ದಾರೆ. ಆದರೆ ಅವು ನಿರಂತರ ಬೆಳಗದೇ ಬಂದ್ ಆಗಿ ಕತ್ತಲು ಕವಿದಿರುತ್ತದೆ. ಹರಿಹರ ನಗರದಲ್ಲಿ ಬೈಕ್‌ಗಳ ಕಳವು ಪ್ರಕರಣ ಹೆಚ್ಚುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸಿಸಿಟಿವಿ ಕ್ಯಾಮರಾ, ಬೀದಿದೀಪ ವ್ಯವಸ್ಥೆ ಸರಿಯಿಲ್ಲದಿರುವುದೇ ಆಗಿದೆ. ತುಂಗಭದ್ರಾ ಸೇತುವೆ ಮೇಲೆ ರಾತ್ರಿ 8 ಗಂಟೆ ನಂತರ ಕತ್ತಲು ತುಂಬಿ, ಭಯದ ವಾತಾವರಣ ಇರುತ್ತದೆ. ಇಲ್ಲಿ ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆಗಳನ್ನು ತೆರೆದಿಟ್ಟರು.

ಪ್ರಮುಖ ರಸ್ತೆಗಳಾದ ಹರಿಹರದಿಂದ ದಾವಣಗೆರೆಗೆ ಹೋಗುವ ಮೇಲುಸೇತುವೆ ಕೆಳಭಾಗದ ರಸ್ತೆ, ತುಂಗಭದ್ರಾ ಸೇತುವೆ ಮೇಲೆ, ಇಂಡಸ್ಟ್ರಿಯಲ್ ಏರಿಯಾದಿಂದ ಸೆಂಟ್ ಮೇರಿಸ್ ಶಾಲೆವರೆಗೆ ಹಾಗೂ ಎಪಿಎಂಸಿಯಿಂದ ಬೈಪಾಸ್‌ಗೆ ಹೋಗುವ ರಸ್ತೆ ಹಾಗೂ ಹರಪನಹಳ್ಳಿ ಸರ್ಕಲ್‌ನಿಂದ 4 ದಿಕ್ಕುಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಬೀದಿದೀಪಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದರು.

ಮನವಿ ಸಲ್ಲಿಸುವ ಸಂದರ್ಭ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಅಧ್ಯಕ್ಷರಾದ ಆನಂದ್ ಎಂ.ಆರ್. ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಸಿ.ಎಚ್., ವಿಜಯ್, ಅರುಣ್, ಜೀವನ್, ಸುನೀಲ್ ಬಿಲ್ಲ, ಅನಿಲ್, ದುರ್ಗಪ್ಪ, ಶಮೀವುಲ್ಲಾ, ಕರಿಬಸ್ಯಾ, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

- - -

(ಕೋಟ್‌) ಹರಿಹರದ ನಾಲ್ಕು ದಿಕ್ಕಿನಲ್ಲಿಯೂ ಈ ರೀತಿ ಸಮಸ್ಯೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಸಿಸಿಟಿವಿ ಕ್ಯಾಮೆರಾ ಹಾಗೂ ಬೀದಿದೀಪಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟ ಮಾಡಬೇಕಾಗುತ್ತದೆ.

- ಸದಸ್ಯರು, ಜಯ ಕರ್ನಾಟಕ ಸಂಘಟನೆ.

- - -

-16HRR.02:

ಹರಿಹರ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ನಗರಸಭೆ ಎಇಇ ವಿನಯ್, ಪೊಲೀಸ್‌ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಿದರು.