- ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು - ಆಂಧ್ರದಲ್ಲಿ ದಸರಾ ನೋಡಲು ಹೋಗಿದ್ದರು - ವಾಪಸ್ ಬರುವಾಗ ಅಪಘಾತ ಸಂಭವಿಸಿ ಸಾವು --- ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ರಸ್ತೆ ಬದಿ ನಿಂತಿದ್ದ ಸಿಮೆಂಟ್ ಮಿಕ್ಸಿಂಗ್ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ವರ್ಷದ ಮಗು, ಹನ್ನೆರಡು ಕಾರ್ಮಿಕರು ಸೇರಿ ಒಟ್ಟು 13 ಮಂದಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಸುಮಾರು 6.30ರ ಸುಮಾರಿಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗೊರಂಟ್ಲದಿಂದ ಬೆಂಗಳೂರಿನತ್ತ ಬರುತ್ತಿದ್ದ ಟಾಟಾ ಸುಮೋ ರಸ್ತೆ ಬದಿ ನಿಂತಿದ್ದ ಸಿಮೆಂಟ್ ಮಿಕ್ಸಿಂಗ್ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೆ ಆರು ಮಂದಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾರೆ. ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಡಿಕ್ಕಿ ರಭಸಕ್ಕೆ ಟಾಟಾ ಸುಮೋ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜು ಮುಸುಕಿದ್ದರಿಂದ ಟಾಟಾ ಸುಮೋ ಚಾಲಕನಿಗೆ ರಸ್ತೆಬದಿ ನಿಂತಿದ್ದ ಲಾರಿ ಕಾಣದೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತರನ್ನು ದೊಡ್ಡಬಳ್ಳಾಪುರ ನಗರದ ಅರುಣ (32), ಅವರ ಪುತ್ರ ರುತ್ವಿಕ್ (6), ಬಾಗೇಪಲ್ಲಿ ತಾಲೂಕು ಮಾರ್ಗಾನಕುಂಟೆಯ ನರಸಿಂಹಮೂರ್ತಿ (37), ಆಂಧ್ರಪ್ರದೇಶದ ನರಸಿಂಹಪ್ಪ(40), ಪೆರಿಮಿಳಿ ಪವನ್ ಕುಮಾರ್ (32), ಶಾಂತಮ್ಮ (37) ಮತ್ತು ರಾಜವರ್ಧನ್ (15), ನಾರಾಯಣಪ್ಪ(50), ಎ. ವೆಂಕಟರಮಣ (51), ಬೆಲ್ಲಾಲ ವೆಂಕಟಾದ್ರಿ(32), ಈತನ ಪತ್ನಿ ಬೆಲ್ಲಾಲ ಲಕ್ಷ್ಮಿ(20), ವೆಂಕಟನಾರಾಯಣ(51) ಮತ್ತು ಬೆಂಗಳೂರಿನ ಸುಬ್ಬಮ್ಮ ಅಲಿಯಾಸ್ ವೆಂಕಟಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ದಸರಾ ನೋಡಲು ಹೋಗಿದ್ದರು: ಮೃತರು ಬೆಂಗಳೂರಿನಲ್ಲಿ ವಿವಿಧೆಡೆ ಕೆಲಸ ಮಾಡುತ್ತಿದ್ದು, ಎಲ್ಲರೂ ಪರಿಚಿತರು. ದಸರಾ ಉತ್ಸವ ನೋಡಲೆಂದು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗೊರಂಟ್ಲಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. --