ಕನ್ನಡಪ್ರಭ ವಾರ್ತೆ ಹಾವೇರಿ
ದೇವರ ದರ್ಶನ ಮುಗಿಸಿ ಊರಿಗೆ ವಾಪಸಾಗುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಟಿಟಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ, ಹನುಮಂತಾಪುರ ಗ್ರಾಮದ 13 ಜನರು ಮೃತಪಟ್ಟಿರುವ ದುರಂತ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಟಿಟಿ ವಾಹನದ ಚಾಲಕ ಆದರ್ಶ (25), ಅರುಣಕುಮಾರ (32), ನಾಗೇಶ್ವರರಾವ್ (50), ಭಾಗ್ಯಾಬಾಯಿ (45), ವಿಶಾಲಾಕ್ಷಿ (49), ಸುಭದ್ರಾಬಾಯಿ (60), ಅಂಜಲಿ (29), ಮಂಜುಳಾಬಾಯಿ (60), ಮಾನಸಾ (20), ರೂಪಾಬಾಯಿ (35), ಮಂಜುಳಾ (54), ಆರ್ಯ (5) ಮತ್ತು ನಂದನ್ (3) ಮೃತಪಟ್ಟವರು. ಪರಶುರಾಮ ಸಿದ್ದಪ್ಪ (48) ಹಾಗೂ ಗೌತಮ್ (12) ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಅರ್ಪಿತಾ (14) ಹಾಗೂ ಅನ್ನಪೂರ್ಣ (54) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರೆಲ್ಲರೂ ಒಂದೇ ಗ್ರಾಮದವರಾಗಿದ್ದು, ಸಂಬಂಧಿಕರೇ ಆಗಿದ್ದಾರೆ.ಚಾಲಕ ಆದರ್ಶ ಕೆಲ ದಿನಗಳ ಹಿಂದಷ್ಟೇ ಟಿಟಿ ವಾಹನ ಖರೀದಿಸಿದ್ದ. ಸಂಬಂಧಿಕರು, ಅಕ್ಕಪಕ್ಕದ ಮನೆಯವರನ್ನೆಲ್ಲ ದೇವರ ದರ್ಶನಕ್ಕೆಂದು ಜೂ.24ರಂದು ಗ್ರಾಮದಿಂದ ಕರೆದೊಯ್ದಿದ್ದ. ಮಹಾರಾಷ್ಟ್ರದ ತುಳಜಾಭವಾನಿ, ಚಿಂಚೋಳಿ ಮಾಯಮ್ಮ, ಸವದತ್ತಿ ಯಲ್ಲಮ್ಮ ಮುಂತಾದ ದೇವಸ್ಥಾನಗಳಿಗೆ ತೆರಳಿ ಊರಿಗೆ ವಾಪಸಾಗುತ್ತಿದ್ದಾಗ ಸಮೀಪದ ಗುಂಡೇನಹಳ್ಳಿ ಬಳಿ ಶುಕ್ರವಾರ ನಸುಕಿನ 3.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದ ಅರ್ಧ ಭಾಗ ಲಾರಿಯ ಹಿಂಭಾಗದಲ್ಲಿ ಸಿಕ್ಕು ನುಜ್ಜುಗುಜ್ಜಾಗಿದೆ. ಬಹುತೇಕರು ವಾಹನದಲ್ಲೇ ಅಪ್ಪಚ್ಚಿಯಾಗಿ ಅಸುನೀಗಿದ್ದರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಪ್ರಯಾಸದಿಂದ ಮೃತದೇಹವನ್ನು ಟಿಟಿ ವಾಹನದಿಂದ ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.ಮುಗಿಲು ಮುಟ್ಟಿದ ಆಕ್ರಂದನ: ಭೀಕರ ದುರಂತದ ಘಟನೆ ಸುದ್ದಿ ತಿಳಿದು ಮೃತರ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾರೆ. ಶವಾಗಾರದಲ್ಲಿದ್ದ ಮೃತದೇಹ ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮವರನ್ನು ನೆನೆದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಅರ್ಪಿತಾ ಅಕ್ಷರಶಃ ಅನಾಥಳಾಗಿ ಕಣ್ಣೀರಿಟ್ಟಳು. ಕಣ್ಣೆದುರೇ ಅಪ್ಪ, ಅಮ್ಮ ಹಾಗೂ ಟಿಟಿ ವಾಹನದ ಚಾಲಕನಾಗಿದ್ದ ಅಣ್ಣ ಮೂವರನ್ನೂ ಕಳೆದುಕೊಂಡು ಅತ್ತು ಕಣ್ಣೀರಾಗಿದ್ದಳು.
ಸ್ವಗ್ರಾಮಕ್ಕೆ ಮೃತದೇಹ ರವಾನೆ:ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಎಮ್ಮಿಹಟ್ಟಿ ಗ್ರಾಮ, ಹನುಮಂತಾಪುರ ಗ್ರಾಮಗಳಿಗೆ 10 ಮೃತದೇಹ ಹಾಗೂ ಚಿಕ್ಕಮಗಳೂರಿನ ಬಿರೂರಿನತ್ತ 3 ಮೃತದೇಹಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸಂಬಂಧಿಕರು ಒಯ್ದರು.