ಗದಗ ಜಿಲ್ಲೆಯಲ್ಲಿ 3 ತಿಂಗಳಲ್ಲಿ 13 ರೌಡಿಶೀಟರ್‌ಗಳ ಗಡಿಪಾರು!

KannadaprabhaNewsNetwork |  
Published : Jul 08, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಗಡಿಪಾರು ಶಿಕ್ಷೆಗೆ ಒಳಗಾದ ಆರೋಪಿಗಳ ಹಿನ್ನೆಲೆ ಅತ್ಯಂತ ಕರಾಳವಾಗಿದ್ದು, ಇವರ ಮೇಲೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

ಶಿವಕುಮಾರ ಕುಷ್ಟಗಿ

ಗದಗ: ​ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ರೌಡಿಶೀಟರ್‌ಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ 3 ತಿಂಗಳಲ್ಲಿ 13 ರೌಡಿಶೀಟರ್‌ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ್ದು, ಸಮಾಜವಿರೋಧಿ ಶಕ್ತಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಅಪರಾಧಗಳಲ್ಲಿ ಸಕ್ರಿಯರಾಗಿರುವುದರೊಂದಿಗೆ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಜಿಲ್ಲೆಯ ಆರೋಪಿಗಳ ಇತಿಹಾಸವನ್ನು ಸಂಪೂರ್ಣವಾಗಿ ಜಾಲಾಡಿದ ಪೊಲೀಸರು, ಅವರ ವಿರುದ್ಧದ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಸಾರ್ವಜನಿಕ ಹಿತದೃಷ್ಟಿ ಹಾಗೂ ಶಾಂತಿಪಾಲನೆಯನ್ನು ಪರಿಗಣಿಸಿ ಗಡಿಪಾರು ಆದೇಶ ಹೊರಡಿಸಲಾಗಿದೆ.

​ಗಂಭೀರ ಅಪರಾಧಗಳ ಹಿನ್ನೆಲೆ: ಗಡಿಪಾರು ಶಿಕ್ಷೆಗೆ ಒಳಗಾದ ಆರೋಪಿಗಳ ಹಿನ್ನೆಲೆ ಅತ್ಯಂತ ಕರಾಳವಾಗಿದ್ದು, ಇವರ ಮೇಲೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡುವುದು, ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಹೆದರಿಸಿ ಹಣ ವಸೂಲಿ ಮಾಡುವುದು ಹಾಗೂ ಅಕ್ರಮ ಜೂಜಾಟದ ದಂಧೆ ನಡೆಸುವುದು. ಯುವಪೀಳಿಗೆಯನ್ನು ಹಾದಿ ತಪ್ಪಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಕಾನೂನುಬಾಹಿರ ಸಾಗಣೆಯಲ್ಲಿ ತೊಡಗಿರುವುದು. ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ ಶಾಂತಿ ಕದಡಿರುವ ಗಂಭೀರ ಆರೋಪಗಳು ಇವರ ಮೇಲಿವೆ. ​ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಭಾರತೀಯ ದಂಡ ಸಂಹಿತೆ, ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

​ಕಾನೂನು ಏನು ಹೇಳುತ್ತದೆ?: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವ ಕಠಿಣ ಕ್ರಮವನ್ನು ಮುಖ್ಯವಾಗಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 54, 55 ಮತ್ತು 56ರ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಸಾರ್ವಜನಿಕ ಶಾಂತಿ ಕಾಪಾಡಲು ಸಿಆರ್‌ಪಿಸಿ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿಯೂ ಬಾಂಡ್‌ಗಳನ್ನು ಬರೆಸಿಕೊಳ್ಳಲಾಗುತ್ತದೆ. ಒಂದು ವೇಳೆ ಗಡಿಪಾರು ಆದೇಶವನ್ನು ಉಲ್ಲಂಘಿಸಿ, ನಿಗದಿತ ಅವಧಿಗಿಂತ ಮುಂಚಿತವಾಗಿ ಅಥವಾ ಅನುಮತಿಯಿಲ್ಲದೆ ಆ ವ್ಯಕ್ತಿ ಮತ್ತೆ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸಿದರೆ, ಅದನ್ನು ಗಂಭೀರ ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 141ರ ಅಡಿಯಲ್ಲಿ ಪೊಲೀಸರು ವಾರಂಟ್ ಇಲ್ಲದೆಯೇ ತಕ್ಷಣವೇ ಬಂಧಿಸಬಹುದು. ಈ ಉಲ್ಲಂಘನೆಗಾಗಿ ಮತ್ತೆ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಹಾಗೂ ಉಲ್ಲಂಘಿಸಿದ ವ್ಯಕ್ತಿ ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಿ ಮತ್ತೊಂದು ದೂರದ ಜಿಲ್ಲೆಗೆ ಸ್ಥಳಾಂತರಿಸುವ ಕ್ರಮವನ್ನೂ ಜರುಗಿಸಬಹುದು.​ಜಿಲ್ಲೆಯಲ್ಲಿ ರೌಡಿಸಂ, ಗೂಂಡಾಗಿರಿ ಅಥವಾ ಯಾವುದೇ ರೀತಿಯ ಸಮಾಜಘಾತಕ ಚಟುವಟಿಕೆಗಳು ತಲೆ ಎತ್ತಲು ಅವಕಾಶ ನೀಡುವುದಿಲ್ಲ. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದರು.ಗಡಿಪಾರಾದವರ ವಿವರ

ದವನಪ್ಪ, ದಾವಲಸಾಬ್, ಅಭಿಷೇಕ್ ಈ ಮೂರು ಜನ ಬಾಗಲಕೋಟೆ ಜಿಲ್ಲೆಗೆ, ಸಾಹಿಲ್ ಕೊಪ್ಪಳ, ರಾಜಣ್ಣ ಬಾಗಲಕೋಟೆ, ಲಾಲಸಾಬ, ಮೈನುದ್ದೀನ, ಫಕ್ರುಸಾಬ, ಹಾಲಪ್ಪ4 ಜನ ಹಾವೇರಿ ಜಿಲ್ಲೆಗೆ, ದರ್ಶನ ವಿಜಯಪುರ ಜಿಲ್ಲೆಗೆ, ಭೈರಪ್ಪ ಹಾವೇರಿ ಜಿಲ್ಲೆಗೆ, ಶೇಖಪ್ಪ ಕೊಪ್ಪಳ ಜಿಲ್ಲೆಗೆ ಹಾಗೂ ಕಳಕಪ್ಪ ಧಾರವಾಡ ಜಿಲ್ಲೆಗೆ ಗಡಿಪಾರುಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಟಿಸಿಎಲ್ ಗ್ರಿಡ್ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಆಗ್ರಹ
ಎಸ್ಸಿ, ಎಸ್ಟಿ ಅಭಿವೃದ್ಧಿ ಅನುದಾನ ಸದ್ಬಳಕೆಯಾಗಲಿ: ಶ್ರೀಧರ್ ಚಿನಗುಂಡಿ