ವರದಾ, ತುಂಗಭದ್ರಾದಲ್ಲಿ ಹೆಚ್ಚಿದ ಹರಿವು, ರೈತರಲ್ಲಿ ಮೂಡಿದ ಹರ್ಷ

KannadaprabhaNewsNetwork |  
Published : Jul 08, 2026, 02:15 AM IST
ಹಾವೇರಿ ಸಮೀಪದ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದು. | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯ ಮತ್ತೆ ಚುರುಕಾಗಿದ್ದು, ಬರಡಾಗುತ್ತಿದ್ದ ಭೂಮಿಗೆ ತಂಪೆರೆದಿದ್ದಾನೆ. ಅಲ್ಲದೇ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ ನದಿಯ ಹರಿವು ಹೆಚ್ಚಿದ್ದು, ಇಷ್ಟು ದಿನ ಮಳೆಯಿಲ್ಲದೇ ಕಂಗಾಲಾಗಿದ್ದ ಅನ್ನದಾತರ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದಂತಾಗಿದೆ.

ಹಾವೇರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯ ಮತ್ತೆ ಚುರುಕಾಗಿದ್ದು, ಬರಡಾಗುತ್ತಿದ್ದ ಭೂಮಿಗೆ ತಂಪೆರೆದಿದ್ದಾನೆ. ಅಲ್ಲದೇ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ ನದಿಯ ಹರಿವು ಹೆಚ್ಚಿದ್ದು, ಇಷ್ಟು ದಿನ ಮಳೆಯಿಲ್ಲದೇ ಕಂಗಾಲಾಗಿದ್ದ ಅನ್ನದಾತರ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದಂತಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದರೂ, ನದಿಗಳ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಮೇಲ್ಭಾಗದ ಜಿಲ್ಲೆಗಳಾದ ಶಿರಸಿ ಹಾಗೂ ಶಿವಮೊಗ್ಗ ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆ. ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಜೀವನಾಡಿಗಳಾದ ವರದಾ ಮತ್ತು ತುಂಗಭದ್ರಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದಾಗಿ ಬತ್ತಿ ಹೋಗುತ್ತಿದ್ದ ನದಿಗಳು ಈಗ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರಗಳಿಗೆ ಹೊಸ ಜೀವಕಳೆ ಬಂದಂತಾಗಿದೆ.

ರೈತರಲ್ಲಿ ಮೂಡಿದ ಭರವಸೆ: ಕಳೆದ ಕೆಲವು ವಾರಗಳಿಂದ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗುವ ಭೀತಿ ಎದುರಾಗಿತ್ತು. ಇದರಿಂದ ಕಂಗಾಲಾಗಿದ್ದ ಜಿಲ್ಲೆಯ ರೈತರು ಆಕಾಶದ ಕಡೆ ಮುಖ ಮಾಡಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಈಗ ಕಳೆದ ಎರಡು ದಿನಗಳಿಂದ ವಾತಾವರಣ ಸಂಪೂರ್ಣ ಬದಲಾಗಿದ್ದು, ಜಿಟಿಜಿಟಿ ಮಳೆ ಮುಂದುವರಿದಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿರುವುದರಿಂದ ಅಂತರ್ಜಲ ಮಟ್ಟವೂ ಸುಧಾರಿಸುವ ನಿರೀಕ್ಷೆಯಿದೆ.

ನದಿ ಪಾತ್ರದ ಗ್ರಾಮಗಳ ರೈತರು ಪಂಪ್‌ಸೆಟ್‌ಗಳ ಮೂಲಕ ತೋಟ ಹಾಗೂ ಗದ್ದೆಗಳಿಗೆ ನೀರು ಹರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಮಂಗಳವಾರ ಬೆಳಗ್ಗೆವರೆಗಿನ 24 ಗಂಟೆಗಳ ಅವಧಿಯಲ್ಲಿ ಹಾವೇರಿಯಲ್ಲಿ 10.20 ಮಿಮೀ, ಹಾನಗಲ್ಲ 16.76 ಮಿಮೀ, ಸವಣೂರು 10.49, ಶಿಗ್ಗಾಂವಿ 15.85 ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 10.10 ಮಿಮೀ ಮಳೆ ಬಿದ್ದಿದೆ. ಮಂಗಳವಾರವೂ ಮಳೆ ಮುಂದುವರಿದಿದೆ. ಇದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಟಿಸಿಎಲ್ ಗ್ರಿಡ್ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಆಗ್ರಹ
ಎಸ್ಸಿ, ಎಸ್ಟಿ ಅಭಿವೃದ್ಧಿ ಅನುದಾನ ಸದ್ಬಳಕೆಯಾಗಲಿ: ಶ್ರೀಧರ್ ಚಿನಗುಂಡಿ