- ಅಂಚೆ ಕಾರ್ಡ್‌ನಲ್ಲೂ ದೂರು ನೀಡಿದರೆ ಕ್ರಮ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಹೇಳಿಕೆ । 102 ಪ್ರಕರಣ ಇತ್ಯರ್ಥ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಏ.22ರಿಂದ 25ರವರೆಗೆ ಒಟ್ಟು 22 ಸರ್ಕಾರಿ ಕಚೇರಿ, ಸ್ಥಳಗಳಿಗೆ ಭೇಟಿ ನೀಡಿ, 13 ಸ್ವಯಂಪ್ರೇರಿತ ದೂರು ಹಾಗೂ 510 ದೂರು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಇದರಲ್ಲಿ 77 ಪ್ರಕರಣ, ಹಳೆಯ ಪ್ರಕರಣಗಳ ಪೈಕಿ 25 ಸೇರಿದಂತೆ ಒಟ್ಟು 102 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಮಾರುಕಟ್ಟೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಉಗ್ರಾಣ, ಪಾಲಿಕೆ, ತಾಲೂಕು ಕಚೇರಿ, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ಕಚೇರಿ, ಹೆಬ್ಬಾಳ್, ಹಿರೇತೊಗಲೇರಿ ಕಲ್ಲು ಕ್ವಾರಿ, ಕ್ರಷರ್, ಸೂಳೆಕೆರೆಗೆ ಭೇಟಿ ನೀಡಿದ್ದು, ನಿರ್ವಹಣೆ ಕುರಿತಂತೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ ಎಂದರು.
ಭ್ರಷ್ಟಾಚಾರ ಎಂದಿಗೂ ಸಹಿಸಲ್ಲ:ಲೋಕಾಯುಕ್ತ ಪೊಲೀಸರಿಂದ ವರದಿ ಪಡೆದು ವಿಚಾರಣೆ ಕೈಗೊಳ್ಳಳಾಗುವುದು. ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದ್ದು, ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ಲೋಕಾಯುಕ್ತ ಎಂದಿಗೂ ಸಹಿಸದು. ಸದ್ಯ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇಗೆ ಮೊದಲ ಆದ್ಯತೆ ನೀಡಿದೆ. ಲೋಕಾಯುಕ್ತ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ರಾಜ್ಯದಲ್ಲಿ ಸುಮಾರು 23 ಸಾವಿರ ಪ್ರಕರಣ ದಾಖಲಾಗಿವೆ ಎಂದು ಹೇಳಿದರು.
ದಾವಣಗೆರೆಯಲ್ಲೇ ಹೆಚ್ಚು ದೂರು:ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ.30ರಷ್ಟರಲ್ಲಿ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿರುವ ಸಂಭವವಿದೆ. ದಾವಣಗೆರೆ ಜಿಲ್ಲೆಯ ದೂರುಗಳಿಗೆ ಸಂಬಂಧಿಸಿದಂತೆ 114 ಕೇಸ್‌ನಲ್ಲಿ ವಿಚಾರಣೆ ಬಾಕಿ ಇದ್ದವು. ಇವುಗಳ ವಿಚಾರಣೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ವಿಚಾರಣೆ ನಡೆಸಲಾಗಿದೆ. ಇದರಲ್ಲಿ 25 ಪ್ರಕರಣ ಇತ್ಯರ್ಥಗೊಂಡಿವೆ. ಜನರಿಗೆ ಲೋಕಾಯುಕ್ತ ಬಗ್ಗೆ ಜಾಗೃತಿ ಮೂಡಿರುವುದರಿಂದ ನಾನು ಭೇಟಿ ನೀಡಿದ 9 ಜಿಲ್ಲೆಗಿಂತ ದಾವಣಗೆರೆಯಲ್ಲೇ ಅತಿ ಹೆಚ್ಚು ದೂರು ಸ್ವೀಕೃತವಾಗಿವೆ ಎಂದು ತಿಳಿಸಿದರು.
ಭೂ ಮಾಪನ ಇಲಾಖೆ, ಕಂದಾಯ ಇಲಾಖೆ ಬಗ್ಗೆ ಹೆಚ್ಚು ದೂರು ದಾಖಲಾಗಿವೆ. ಜೊತೆಗೆ ಇ-ಸ್ವತ್ತು ನೀಡದಿರುವುದು, ಅಕ್ರಮ ಒತ್ತುವರಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ. ನೋಂದಣಿ ಅವಧಿ ಮುಗಿದ ಶಾಲಾ ವಾಹನಗಳ ವಿವರ ಪಡೆದುಕೊಳ್ಳುವುದಾಗಿ ನ್ಯಾಯಮೂರ್ತಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸೂಳೆಕೆರೆ ಒತ್ತುವರಿ ತೆರವಿಗೆ ಸೂಚನೆ:
ಚನ್ನಗಿರಿ ತಾಲೂಕಿನ ಸೂಳೆಕೆರೆ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಕೆರೆ ಅಂಗಳ, ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವಂತೆ ಸೂಚನೆ ನೀಡಲಾಗಿದೆ. ಅದೇ ಕೆರೆಯಲ್ಲಿ ಬೋಟಿಂಗ್ ಪಾಯಿಂಟ್ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿ ಪರಿವರ್ತಿಸಲು ಸೂಚನೆ ನೀಡಿದ್ದೇವೆ. ಆಹಾರ ಪದಾರ್ಥಗಳು, ತ್ಯಾಜ್ಯ, ಪ್ಲಾಸ್ಟಿಕ್ ಕೆರೆಗೆ ಸೇರದಂತೆ ತಡೆಯಲು ಹಾಗೂ ಕೆರೆ ಹೂಳೆತ್ತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ. ರಾಜಶೇಖರ, ಎನ್.ವಿ. ಅರವಿಂದ, ವಿ.ಎನ್. ಮಿಲನ, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
- - -(ಬಾಕ್ಸ್) * ಪೌರ ಕಾರ್ಮಿಕರು ದೂರು ಕೊಟ್ಟರೆ ಕ್ರಮ ದಾವಣಗೆರೆ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಸೇವೆ ಕಾಯಂ ಸೇರಿದಂತೆ ಯಾವುದೇ ಕೆಲಸ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ ಮಾಡುವುದು, ವಿನಾಕಾರಣ ವಿಳಂಬ, ಅಲೆದಾಡುವುದು ಹೀಗೆ ಯಾವುದೇ ಇಲಾಖೆಯಲ್ಲಿ ಏನೇ ತೊಂದರೆ ಆಗುತ್ತಿದ್ದರೂ ನೈಜ ಪ್ರಕರಣದಲ್ಲಿ ಅಂಚೆ ಕಾರ್ಡ್‌ನಲ್ಲೂ ತಮಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. - ಬಿ.ವೀರಪ್ಪ, ಉಪ ಲೋಕಾಯುಕ್ತ
- - - -25ಕೆಡಿವಿಜಿ9:ದಾವಣಗೆರೆಯಲ್ಲಿ ಶುಕ್ರವಾರ ಉಪ ಲೋಕಾಯುಕ್ತ ಬಿ.ವೀರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.