- ಹೊನ್ನಾಳಿ ತಾಲೂಕಿನ ಕುಂದೂರು, ಹೊಳೆ ಹರಳಹಳ್ಳಿ, ಹೊಸೂರು ಗ್ರಾಮಗಳ ಗುಡ್ಡಗಳಲ್ಲಿ ನಿರಂತರ ಗಣಿಗಾರಿಕೆ, ಪರಿಸರಕ್ಕೆ ಧಕ್ಕೆ - ಕೃಷಿ, ಕಂದಾಯ, ಗಣಿ, ಪೊಲೀಸ್, ಭೂಮಾಪನ, ಗ್ರಾಪಂ ಅಧಿಕಾರಿಗಳು ಶಾಮೀಲು: ಆರ್‌ಟಿಐ ಕಾರ್ಯಕರ್ತ ಹನುಮಂತಪ್ಪ ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹೊನ್ನಾಳಿ ತಾಲೂಕಿನ ಕುಂದೂರು ಗುಡ್ಡ, ಹೊಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಹಾಗೂ ಇದಕ್ಕೆ ಕಾರಣರಾದ ವಿವಿಧ ನಿಲಾಖೆಗಳ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ, ಆರ್‌ಟಿಐ ಕಾರ್ಯಕರ್ತ ಹನುಮಂತಪ್ಪ ಸೊರಟೂರು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಗೆ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನಲ್ಲಿ ಮಣ್ಣು ಗಣಿಗಾರಿಕೆ ಅವ್ಯಾಹತ ನಡೆಯುತ್ತಿದೆ. ಕೃಷಿ ಭೂಮಿ, ಸಾಗುವಳಿ ಭೂಮಿ, ಗುಡ್ಡದ ಜಾಗವೆಂದೂ ನೋಡದೇ, ಕೃಷಿ, ಕಂದಾಯ, ಗಣಿ-ಭೂ ವಿಜ್ಞಾನ, ಪೊಲೀಸ್ ಇಲಾಖೆ ಹೀಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಅಕ್ರಮ ಮಣ್ಣು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಷ್ಟೇ ಅಲ್ಲ, ಪ್ರಕೃತಿ, ಪರಿಸರ, ಪ್ರಾಣಿ ಸಂಕಲಕ್ಕೂ ಅಪಾಯ ತಂದಿದ್ದಾರೆ ಎಂದರು.ಮಣ್ಣು ಗಣಿಗಾರಿಕೆಗೆ ಅವಕಾಶ ಕೊಟ್ಟ ಸಾಗುಳಿ ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಂಡು, ಕಾನೂನು ಕ್ರಮ ಜರುಗಿಸಬೇಕು. ಸಾಸ್ವೇಹಳ್ಳಿ-2ನೇ ಹೋಬಳಿ ಕುಂದೂರು ಗ್ರಾಮ, ಗೋವಿನಕೋವಿ-2ನೇ ಹೋಬಳಿ ಹೊಳೆ ಹರಳಹಳ್ಳಿ, ಹೊಸೂರು ಗ್ರಾಮದ ಗುಡ್ಡಗಳಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲುಗಳನ್ನು ಹಗಲಿರುಳೆನ್ನದೇ ನಿರಂತರ ಲೂಟಿ ಮಾಡಲಾಗುತ್ತಿದೆ. ಐತಿಹಾಸಿಕ ದೇವಸ್ಥಾನಗಳಿಗೂ ಸಂಚಕಾರ ತರಲಾಗಿದೆ ಎಂದು ಆರೋಪಿಸಿದರು.
ಕುಂದೂರು ಗುಡ್ಡವು ರಾಮಾಯಣದ ಇತಿಹಾಸವುಳ್ಳ ಗುಡ್ಡವಾಗಿದೆ. ಇದೇ ಗುಡ್ಡದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಐತಿಹಾಸಿದ ದೇವಸ್ಥಾನವೂ ಇದೆ. ಈ ಗುಡ್ಡವು ಯಾವುದೇ ಬೆಳೆ ಬೆಳೆಯಲಾಗದ ಗುಡ್ಡವಾಗಿದೆ. ಪ್ರಾಣಿ, ಪಕ್ಷಿಗಳಿರುವ ಪರಿಸರವಾಗಿದೆ. ಆದರೂ, ಇಲ್ಲಿ ಬೆಳೆ ಬೆಳೆಯಲಾಗದೆಂಬ ಅರಿವಿದ್ದರೂ ಅಧಿಕಾರಿಗಳು ಸಾಗುವಳಿ ಪತ್ರ ನೀಡಿ, ಕಲ್ಲು-ಮಣ್ಣು ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ. ದಿನದಿಂದ ದಿನಕ್ಕೆ ಗುಡ್ಡ ಸವೆಯುತ್ತಿದೆ ಎಂದು ದೂರಿದರು.25-30 ಅಡಿಯಷ್ಟು ಕಲ್ಲು-ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ. ಹಲವಾರು ಸಂಘಟನೆಗಳು ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಸಂಬಂಧಿಸಿದ ಇಲಾಖೆಗಳು, ಜಿಲ್ಲಾಡಳಿತಕ್ಕೆ ದೂರು, ಮನವಿ, ಪ್ರತಿಭಟನೆಗಳ ಮಾಡಿದ್ದರೂ ಯಾವುದೇ ಸ್ಪಂದನೆ ಇಲ್ಲ. ಗಣಿಗಾರಿಕೆ ಪ್ರಶ್ನಿಸಿದವರ ಮೇಲೆ ಜೆಸಿಬಿ, ಟಿಪ್ಪರ್ ಲಾರಿ ಹತ್ತಿಸಿ, ಕೊಲೆ ಮಾಡುವ ಬೆದರಿಕೆ ಹಾಕಲಾಗುತ್ತಿದೆ. 3 ವರ್ಷದಿಂದ ಮಣ್ಣು-ಕಲ್ಲು ಲೂಟಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯಿಂದ ಈವರೆಗೆ ಅನುಮತಿ ನೀಡಿರುವುದು ರಿ.ಸ.ನಂ.76-13ರಲ್ಲಿ 1.20 ಎಕರೆಗೆ ಮಾತ್ರ. ಆದರೆ ದೊಡ್ಡ ಮಟ್ಟದಲ್ಲಿ ಕಲ್ಲು ಮತ್ತು ಮಣ್ಣು ಗಣಿಗಾರಿಕೆ ನಡೆದಿದೆ. ಇಲಾಖೆಗಳ ಅಧಿಕಾರಿಗಳ ಸಹಕಾರದಿಂದಲೇ ವಿವಿಧ ಪಕ್ಷಗಳು, ಜನಪ್ರತಿನಿಧಿಗಳು ಗಣಿಗಾರಿಕೆ ಮಾಡುತ್ತಿದ್ದಾರೆ. ತಪ್ಪಿತಸ್ಥರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರಿಗೆ ಒತ್ತಾಯಿಸಿದರು.ಮುಖಂಡರಾದ ಗಿರೀಶ ಅರಕೆರೆ, ಶಾಂತರಾಜ ಕುಂದೂರು ಇತರರು ಇದ್ದರು.
- - -(ಬಾಕ್ಸ್) * ಉಪ ಲೋಕಾಯುಕ್ತರ ಭೇಟಿ ಸಾಧ್ಯವಾಗಲಿಲ್ಲ! ದಾವಣಗೆರೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ಖುದ್ದಾಗಿ ಕಂಡು, ಹೊನ್ನಾಳಿ ತಾಲೂಕಿನ ಅಕ್ರಮ ಕಲ್ಲು-ಮಣ್ಣು ಗಣಿಗಾರಿಕೆ ವಿಚಾರ ತಿಳಿಸಿ, ದೂರು ನೀಡಲು ಹೋಗಿದ್ದೆವು. ಆದರೆ, ರಾತ್ರಿವರೆಗೆಕಾದರೂ ನಮಗೆ ಉಪ ಲೋಕಾಯುಕ್ತರ ಭೇಟಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳಿಗೆ ದಾವಣಗೆರೆ ಡಿಸಿ ಕಚೇರಿಯಲ್ಲಿ ಲಿಖಿತ ದೂರು ನೀಡಿ, ಅಕ್ರಮ ಮಣ್ಣು-ಕಲ್ಲು ಗಣಿಗಾರಿಕೆ ತಡೆಯಲು ಒತ್ತಾಯಿಸಿದ್ದೇವೆ.
- ಹನುಮಂತಪ್ಪ ಸೊರಟೂರು, ಸಾಮಾಜಿಕ ಕಾರ್ಯಕರ್ತ, ಹೊನ್ನಾಳಿ- - -
-25ಕೆಡಿವಿಜಿ1.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ಹೊನ್ನಾಳಿ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಸೊರಟೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.-25ಕೆಡಿವಿಜಿ2, 3, 4, 5, 6:
ಹೊನ್ನಾಳಿ ತಾಲೂಕಿನ ಕುಂದೂರು, ಹೊಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿರುವುದು.