ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಸಾರಂಗಮಠದ ಕಾಯಕಯೋಗಿ ಲಿಂ.ಚೆನ್ನವೀರ ಮಹಾಸ್ವಾಮಿಗಳ ೧೩೦ ನೇ ಜಯಂತ್ಯುತ್ಸವ ನಿಮಿತ್ತ ನವಂಬರ್ ೧೩ ರಿಂದ ಡಿಸೆಂಬರ್ ೩ರ ವರೆಗೆ ೨೧ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರಂಗಮಠದ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರತಿನಿತ್ಯ ಸಂಜೆ ೬.೩೦ ಗಂಟೆಗೆ ಉಜ್ಜೈನಿಯ ಲಿಂ. ಶ್ರೀ ಸಿದ್ದಲಿಂಗ ಶಿವಾಚಾರ್ಯರ ಪುರಾಣ -ಪ್ರವಚನವನ್ನು ಶಾಪೂರದ ಶ್ರೀ ಸೂಗೂರೇಶ್ವರ ಶ್ರೀಗಳಿಂದ ನೆರವೇರುವುದು. ಲಿಂ.ಶ್ರೀ ಚನ್ನವೀರ ಮಹಾಸ್ವಾಮಿಗಳ ಜಯಂತಿಯ ನ.೧೮ ರಂದು ತಾಲೂಕಿನ ಶ್ರೇಷ್ಠ ಕೃಷಿಕರಿಗೆ ನೀಡುವ ಸಾರಂಗ ಶ್ರೀ ಕೃಷಿ ಪ್ರಶಸ್ತಿಯನ್ನು ಆಲಮೇಲದ ಸಾವಯವ ಕೃಷಿಕ ಸುನೀಲ ನಾರಾಯಣಕರ ಅವರಿಗೆ ಪ್ರಶಸ್ತಿ ಫಲಕ ಮತ್ತು ₹ ೧೧ ಸಾವಿರ ನಗದು ನೀಡಿ ಗೌರವಿಸಲಾಗುವುದು. ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಅಂತಾರಾಷ್ಟ್ರೀಯ ಕೃಷಿ ತಜ್ಞ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಪ್ರಧಾನ ನಿರ್ದೇಶಕ, ಪದ್ಮಶ್ರೀ ಸುಬ್ಬಯ್ಯ ಅಯ್ಯಪ್ಪನ್ ಅವರಿಗೆ ಭಾಸ್ಕರ ಪ್ರಶಸ್ತಿ ಮತ್ತು ₹ ೧ ಲಕ್ಷ ನಗದು ನೀಡಿ ಗೌರವಿಸಲಾಗುವುದು. ಈ ಹಿಂದೆ ದೇಶದ ಖ್ಯಾತ ವಿಜ್ಞಾನಿಗಳಾದ ಸಿ.ಎನ್.ರಾವ್, ಯು.ಆರ್.ರಾವ್, ಡಾ. ಎ.ಎಸ್.ಪಾಟೀಲ, ಕೆ.ಕಸ್ತೂರಿರಂಗನ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ಅವರಿಗೆ ನೀಡಿ ಗೌರವಿಸಿದೆ ಎಂದು ಹೇಳಿದರು.ನ.೨೭ರಂದು ಸಿದ್ದಾಂತ ಶಿಖಾಮಣಿ ಕರ್ತೃ ಸಾಲೋಟಗಿ ಶ್ರೀ ಶಿವಯೋಗಿ ಶಿವಾಚಾರ್ಯರ ಸ್ಮರಣೆಯಲ್ಲಿ ನೀಡುವ ಶಿವಯೋಗಿ ಶಿವಾಚಾರ್ಯ ಪ್ರಶಸ್ತಿಯನ್ನು ಮಡಿಕೇರಿಯ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿ.ಶಿವಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಮತ್ತು ₹ ೧ ಲಕ್ಷ ನಗದು ನೀಡಿ ಗೌರವಿಸಲಾಗುವುದು.ಡಿ.೨ರಂದು ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಕಲ್ಯಾಣೋತ್ಸವ ಮತ್ತು ಡಿ.೩ಕ್ಕೆ ಶ್ರೀ ವೀರಭದ್ರ ದೇವರ ಮತ್ತು ಭದ್ರಕಾಳಿ ಅಮ್ಮನವರ ಮೂರ್ತಿ ಪ್ರತಿಷ್ಠಾಪಿಸಿದ ಬೆಳ್ಳಿ ರಥವನ್ನು ಮಹಿಳೆಯರೆ ಎಳೆಯುವ ಮೂಲಕ ಜಾತ್ರಾ ಮಹೋತ್ಸವ ನಡೆಯಲಿದೆ.ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ಸಾರಂಗ ಶ್ರೀಗಳು ಕೋರಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಅಶೋಕ ವಾರದ, ಡಾ.ಶರಣಬಸವ ಜೋಗೂರ ಇದ್ದರು.