ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ

KannadaprabhaNewsNetwork |  
Published : Jul 26, 2026, 03:15 AM IST
ಖಾನಾಪುರ  | Kannada Prabha

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ನಮ್ಮ ತಾಲೂಕಿನ ರಸ್ತೆಗಳು ಹಾಗೂ ಸೇತುವೆಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹131 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ನಮ್ಮ ತಾಲೂಕಿನ ರಸ್ತೆಗಳು ಹಾಗೂ ಸೇತುವೆಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹131 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅನುದಾನದಲ್ಲಿ ಮುಖ್ಯವಾಗಿ ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಕೆಳಸೇತುವೆಯನ್ನು ಎತ್ತರಿಸುವುದು, ಪಾರಿಶ್ವಾಡ ಬಳಿಯ ಮಲಪ್ರಭಾ ನದಿಯ ಸೇತುವೆಯನ್ನು ದುರಸ್ತಿಗೊಳಿಸುವುದು, ಇಟಗಿ-ಬೀಡಿ-ಪಾರಿಶ್ವಾಡ-ಅವರೊಳ್ಳಿ-ಲಿಂಗನಮಠ ಹಾಗೂ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿಗೊಳಿಸುವುದು ಸೇರಿದಂತೆ ತಾಲೂಕಿನ ಜನರಿಗೆ ಅನುಕೂಲವಾಗುವ ಅನೇಕ ಕಾಮಗಾರಿಗಳು ನಡೆಯಲಿವೆ. ಈಗಾಗಲೇ ಅನೇಕ ಕಾಮಗಾರಿಗಳು ಆರಂಭವಾಗಿದ್ದು, ಇನ್ನೂ ಕೆಲವು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಅಂತಿಮ ಹಂತದಲ್ಲಿವೆ ಎಂದರು.ಕೇಂದ್ರ ಸರ್ಕಾರದ ಸಿಆರ್‌ಐಎಫ್ ಯೋಜನೆಯ ಒಟ್ಟು ₹22 ಕೋಟಿ ಅನುದಾನದಲ್ಲಿ ನೀಲಾವಡೆ-ಕಾನಸುಲಿ ಕ್ರಾಸ್, ಗೋಲ್ಯಾಳಿ-ಬೆಟಗೇರಿ, ಖಾನಾಪುರ-ಲಿಂಗನಮಠ ಮಾರ್ಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಎಂಐಡಿಪಿ ಯೋಜನೆಯಡಿ ಯಡೋಗಾ-ಚಾಪಗಾಂವ, ಗರ್ಲಗುಂಜಿ-ಸಣ್ಣಹೊಸೂರು, ತೋಪಿನಕಟ್ಟಿ-ಲೋಕೊಳ್ಳಿ ಕ್ರಾಸ್ ಹಾಗೂ ಬೈಲೂರು-ದೇವಾಚಿಹಟ್ಟಿ ರಸ್ತೆಗಳಿಗೆ ತಲಾ 1 ಕೋಟಿ ಅನುದಾನ ಮಂಜೂರಾಗಿದೆ. ರಾಜ್ಯ ಸರ್ಕಾರದ ಎಸ್‌ಎಚ್‌ಡಿಪಿ ಯೋಜನೆಯ 12 ಕೋಟಿ ಅನುದಾನದಲ್ಲಿ ಲಾಲವಾಡಿ-ಕೊಡಚವಾಡ, ಅವರೊಳ್ಳಿ-ಬಿಳಕಿ, ಇಟಗಿ-ಪಾರಿಶ್ವಾಡ ಮಾರ್ಗದಲ್ಲಿ ಸಿಸಿ ರಸ್ತೆ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ 28 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಬೇಕವಾಡ ಕ್ರಾಸ್-ಇಟಗಿ ಕ್ರಾಸ್ ನಡುವಿನ ಸಿಂಧನೂರು ಹೆಮ್ಮಡಗಾ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ನಡೆಯಲಿದೆ. ಜೊತೆಗೆ ತಾಲೂಕಿನಲ್ಲಿ ಈಗಿರುವ 3.5 ಮೀಟರ್ ಅಗಲದ ಎಲ್ಲ ರಸ್ತೆಗಳನ್ನು 5 ಮೀಟರ್ ಅಗಲಕ್ಕೆ ವಿಸ್ತರಿಸುವ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.ಕೇಂದ್ರದ ಪ್ರಗತಿಪಥ ಯೋಜನೆಯ ₹15 ಕೋಟಿ ಅನುದಾನದಲ್ಲಿ ಗಣೇಬೈಲ-ಕಾಟಗಾಳಿ, ಕಕ್ಕೇರಿ-ಗುಂಡೇನಟ್ಟಿ, ಭೂರಣಕಿ ಕ್ರಾಸ್-ಘಷ್ಟೊಳ್ಳಿ, ಕಕ್ಕೇರಿ-ಚುಂಚವಾಡ, ಮುಗವಡೆ-ಕಬನಾಳಿ ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು, ಈ ಕಾಮಗಾರಿಗಳು ಪ್ರಸ್ತುತ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿವೆ. ಟೆಂಡರ್ ಹಂತದ ಎಲ್ಲ ಕಾಮಗಾರಿಗಳು ಮಳೆಗಾಲದ ನಂತರ ಆರಂಭವಾಗಲಿವೆ. ಮೇರಡಾ-ಹಲಸಿ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದ ಇನ್ನುಳಿದ ಕಾಮಗಾರಿಗೂ ಅನುಮೋದನೆ ದೊರೆತಿದೆ ಎಂದರು.

₹23 ಕೋಟಿ ಅನುದಾನದಲ್ಲಿ ಸಿಂಧನೂರು-ಹೆಮ್ಮಡಗ ರಾಜ್ಯ ಹೆದ್ದಾರಿಯ ಅಲಾತ್ರಿ ಹಳ್ಳದ ಸೇತುವೆ, ಪಾರಿಶ್ವಾಡ ಸಮೀಪದ ಮಲಪ್ರಭಾ ನದಿಯ ಮೇಲೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹8 ಕೋಟಿ ವಿಶೇಷ ಅನುದಾನದಲ್ಲಿ ಬೈಲೂರು ಗ್ರಾಮದ ಸಂಪರ್ಕ ರಸ್ತೆಗೆ ₹4 ಕೋಟಿ, ಶಿವೋಲಿ-ಚಾಪಗಾಂವ, ಬೋಗೂರು ಮತ್ತು ಬಿದರಭಾವಿ ಗ್ರಾಮಗಳ ಸಂಪರ್ಕ ರಸ್ತೆಗೆ ಒಟ್ಟು ₹4 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಕಳೆದ ವರ್ಷ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ಮಂಜೂರಾಗಿದ್ದ ₹25 ಕೋಟಿ ಅನುದಾನದಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಗ್ರಾಮೀಣ ಭಾಗದ ವಿವಿಧೆಡೆ ಸಿಸಿ ರಸ್ತೆಗಳ ನಿರ್ಮಾಣ, ಶಾಲೆಗಳ ದುರಸ್ತಿ, ಕ್ರೀಡಾಂಗಣಗಳ ಅಭಿವೃದ್ಧಿ ಸೇರಿದಂತೆ ವಿವಿಧ ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಖಾನಾಪುರ ಪಟ್ಟಣದಲ್ಲಿ ಒಟಿಡಿಪಿ ಯೋಜನೆಯ ₹14 ಕೋಟಿ ಅನುದಾನದಲ್ಲಿ ಸಿ.ಸಿ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಖಾನಾಪುರ ತಾಲೂಕಿನ ಗರ್ಲಗುಂಜಿ-ನಂದಿಹಳ್ಳಿ, ಗರ್ಲಗುಂಜಿ-ತೋಪಿನಕಟ್ಟಿ, ಇದ್ದಲಹೊಂಡ-ಮಾಳ ಅಂಕಲೆ, ನಾಗುರ್ಡಾ-ಕಾಟಗಾಳಿ, ಅಲ್ಲೋಳಿ-ಕಾನಸುಲಿ, ಮಳವ-ನೀಲಾವಡೆ, ನಾಗುರ್ಡಾ ವಾಡಾ ಸಂಪರ್ಕ ರಸ್ತೆ, ಜಾಂಬೋಟಿ ವಾಡಾ ಸಂಪರ್ಕ ರಸ್ತೆ, ಪೂರ ಸಂಪರ್ಕ ರಸ್ತೆ ಹಾಗೂ ರುಮೇವಾಡಿ ಸಂಪರ್ಕ ರಸ್ತೆ ಸೇರಿದಂತೆ ಹತ್ತು ರಸ್ತೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ರಾಷ್ಟ್ರೀಯ ಹೆದ್ದಾರಿಯಿಂದ ಗಂಗವಾಳಿ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

-ವಿಠ್ಠಲ ಹಲಗೇಕರ, ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
2.5 ಕೆ.ಜಿ ತೂಕದ ದೈತ್ಯ ಫೈಬ್ರಾಯ್ಡ್‌ ಶಸ್ತ್ರಚಿಕಿತ್ಸೆ