ಶಾಸಕ ರಾಘವೇಂದ್ರ ಹಿಟ್ನಾಳ ಮಾಹಿತಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮಹತ್ವಾಕಾಂಕ್ಷೆಯ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಮಧ್ಯಪ್ರದೇಶ ಮಾದರಿಯಲ್ಲಿ ಅನುಷ್ಠಾನ ಮಾಡಲು ₹554 ಕೋಟಿಗೆ ಅಸ್ತು ನೀಡಿದ್ದು, ಪ್ರಸಕ್ತ ವರ್ಷ ಕಾಲುವೆ ಕಾಮಗಾರಿಗೆ ₹138 ಕೋಟಿ ಬಿಡುಗಡೆ ಮಾಡಿ ಆದೇಶಿಸಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯ ಕುರಿತು ಮಾಹಿತಿ ನೀಡಿದ್ದಾರೆ.
2024-25ನೇ ಸಾಲಿನಲ್ಲಿ ಪ್ಯಾಕೇಜ್ ನಂ-6ರಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ 9ರಿಂದ 12ರ ವರೆಗಿನ 8582 ಹೆಕ್ಟೇರ್ ಭೂಪ್ರದೇಶಕ್ಕೆ ಮಧ್ಯಪ್ರದೇಶ ಮಾದರಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಯ ₹301 ಕೋಟಿ ಮೊತ್ತದಲ್ಲಿ ಪ್ರಸಕ್ತ ವರ್ಷ ಯೋಜನೆಗೆ ₹75.31 ಕೋಟಿ ಅನುದಾನ ಬಿಡುಗಡೆ ಹಾಗೂ ಪ್ಯಾಕೇಜ್ ನಂ-7ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ 13ರಿಂದ 16ರ ವರೆಗಿನ 7941 ಹೆಕ್ಟೇರ್ ಭೂ ಪ್ರದೇಶಕ್ಕೂ ಮಧ್ಯಪ್ರದೇಶ ಮಾದರಿಯ ನೀರಾವರಿ ಕಲ್ಪಿಸುವ ಕಾಮಗಾರಿಯ 252 ಕೋಟಿ ಮೊತ್ತದಲ್ಲಿ ಅವಶ್ಯವಿರುವ ₹63.04 ಕೋಟಿ ಅನುದಾನ ಮಂಜೂರು ಆಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಯ ಅಡಿಗಲ್ಲು ನೆರವೇರಿಸುವ ಮುಖಾಂತರ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.