ಕೆ.ಎಸ್.ಈಶ್ವರಪ್ಪನವರಿಗೆ ಮುಂದಿನ ದಿನದಲ್ಲಿ ಸರ್ಕಾರದ ನೇತೃತ್ವ ವಹಿಸುವ ಭಾಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾರೈಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೆ.ಎಸ್.ಈಶ್ವರಪ್ಪನವರಿಗೆ ಮುಂದಿನ ದಿನದಲ್ಲಿ ಸರ್ಕಾರದ ನೇತೃತ್ವ ವಹಿಸುವ ಭಾಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾರೈಸಿದರು.

ಜಿಲ್ಲೆಯ ಮಲ್ಲೇಶ್ವರ ನಗರದ ಕೆ.ಎಸ್.ಈಶ್ವರಪ್ಪ ಮನೆಯ ಬಳಿ ಕೆ.ಎಸ್‌.ಈಶ್ವರಪ್ಪ ಅವರ 78ನೇ ಜನ್ಮದಿನ ಪ್ರಯುಕ್ತ ಅವರ ಅಭಿಮಾನಿ ಬಳಗದ ಸಹಕಾರದೊಂದಿಗೆ ಶ್ರೀಗಂಧ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ -ನಾನ್ಸ್ ಪ್ರೈವೇಟ್ ಲಿಮಿಟೆಡ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ರಪಠಣ, ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ ಸಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಭಾಂಗಣ ಪ್ರವೇಶಿಸುವಾಗ ಫ್ಲೆಕ್ಸ್‌ನಲ್ಲಿ ಈಶ್ವರಪ್ಪನವರಿಗೆ 78ನೇ ಹುಟ್ಟುಹಬ್ಬ ಎಂದಿತ್ತು. ಎಲ್ಲೋ ಅದು ತಪ್ಪಾಗಿದೆ ಎಂದು ಅನಿಸಿತು. ಏಕೆಂದರೆ ಅವರು 28ರ ಯುವಕರಂತೆ ಸಮಾಜಕ್ಕಾಗಿ ಕ್ರೀಯಾಶೀಲರಾಗಿ ಬದುಕುತ್ತಿದ್ದಾರೆ. ಧರ್ಮದ, ಹಿಂದುತ್ವದ ಪ್ರಶ್ನೆ ಬಂದಾಗ ತನ್ನ ಹಿತವನ್ನು ಬಯಸದೆ ಸಮಾಜಕ್ಕಾಗಿ ಬದುಕುವುದೇ ನಿಜವಾದ ಬದುಕು ಎಂದು ತಿಳಿದು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದೊಂದಿಗೆ ಬೆರೆತು ಜೀವನ ನಡೆಸುತ್ತಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ಸುಖ-ಸಂತೋಷ ಎಲ್ಲವನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಮಂಗಳನಿಧಿಯನ್ನು ಸ್ವೀಕರಿಸಿದ ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿ ಮಾತನಾಡಿ, ನಮ್ಮ ಸಮಾಜದಲ್ಲಿ ವಿಶೇಷ ಪರಂಪರೆ ಇದ್ದು, ಯಾವುದೇ ಕಾರ್ಯವನ್ನು ಮಾಡುವಾಗ ಮೊದಲು ದೇವರು, ಗುರುಗಳನ್ನು ಹಾಗೂ ಬಂಧುಗಳನ್ನು ಕರೆದು ಸತ್ಕರಿಸಿ, ಕೃತಜ್ಞತಾ ಪೂರ್ವಕವಾಗಿ ಫಲ-ತಾಂಬೂಲ ಕೊಡುವ ಪದ್ಧತಿ ಇದೆ. ದೇವಋಣ, ಪಿತೃಋಣ, ಋಷಿಮುನಿಗಳ ಋಣ ತೀರಿಸಲಾಗುವುದಿಲ್ಲ ಎಂದರು.

ಈ ನಿಧಿಯನ್ನು ನಾವು ಸಂಘದ ಕಾರ್ಯಕ್ಕೆ ಬಳಸದೆ ಮಂಗಳ ಕಾರ್ಯಕ್ಕೆ ಬಳಸುತ್ತೇವೆ ಈಶ್ವರಪ್ಪನವರಿಗೆ ೮೨ನೇ ವರ್ಷಕ್ಕೆ ಸಹಸ್ರ ಚಂದ್ರ ದರ್ಶನ ಶಾಂತಿಯೂ ಆಗಲಿ. ಹಿಂದುತ್ವ, ಸಂಘನಿಷ್ಠೆ, ದೇಶ ಮತ್ತು ಗುರುಗಳ ವಿಷಯದಲ್ಲಿ ಅವರು ಎಂದೂ ರಾಜೀಮಾಡಿಕೊಂಡಿಲ್ಲ. ಅವರ ಇಡೀ ಜೀವನದ ಯಶಸ್ಸಿನ ಸಿಂಹಪಾಲು ಅವರ ಶ್ರೀಮತಿಗೆ ಸಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಾತೆಯರಿಂದ ಭಕ್ತಿಗೀತೆ ಮತ್ತು ದೇಶಭಕ್ತಿಗೀತೆ, ಸಾಮೂಹಿಕ ಗಾಯನ ನಡೆಯಿತು.

ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಉತ್ತರ ಕರ್ನಾಟಕ ಭಾಗದ ಹಲವಾರು ಶ್ರೀಗಳು, ಪ್ರಮುಖರಾದ ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್, ಬಿ.ಕೆ.ಮೋಹನ್‌ಕುಮಾರ್, ಶ್ರೀಗಂಧ, ರಾಷ್ಟ್ರಭಕ್ತರ ಬಳಗ, ಗೋವರ್ಧನ ಟ್ರಸ್ಟ್, ಭಜನಾ ಪರಿಷತ್‌ನ ಪದಾಧಿಕಾರಿಗಳು, ಈಶ್ವರಪ್ಪ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಸರ್ವರ ಆತ್ಮೀಯರಾಗಿ ಬೆಳೆದ ಈಶ್ವರಪ್ಪ

ನೂರಾರು ವರ್ಷ ಯಾತಕ್ಕಾಗಿ ಬದುಕಬೇಕು? ಹೇಗೆ ಬದುಕಬೇಕು ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಆತ್ಮಕ್ಕೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ಪರಾರ್ಥವಾಗಿ, ಸಕಲ ಜೀವಿಗಳಿಗಗಿ, ಕಿಂಚತ್ತಾಗಿ ಬದುಕಿದಾಗ ಮಾತ್ರ ಜನ್ಮಕ್ಕೆ ಸಾರ್ಥಕತೆ ಬರುತ್ತದೆ. ಜಾತಿ, ಮತ, ಪಂಥದ ನಿರ್ಬಂಧವಿಲ್ಲದೆ, ಸರ್ವರಿಗೂ ಆತ್ಮೀಯರಾಗಿ ಈಶ್ವರಪ್ಪನವರು ಬೆಳೆದಿದ್ದಾರೆ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಹುಟ್ಟಿದಾಗ ಉಸಿರು ಇರುತ್ತೆ. ದೇಹತ್ಯಾಗ ಮಾಡುವಾಗ ಬಿಟ್ಟುಹೋದ ದಾನ, ಧರ್ಮದ ಹೆಸರು ಇರುತ್ತದೆ. ಈಶ್ವರಪ್ಪನವರ ಸಾಧನೆ ಅವರಿಗೆ ಕೀರ್ತಿ, ಯಶಸ್ಸು ತಂದಿದೆ.

ನಾದಮಯಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ.

ಈಶ್ವರಪ್ಪನವರ ಜೀವನದ ಏಳು-ಬೀಳು ಏನೇ ಇರಲಿ, ಧರ್ಮ ಬಿಟ್ಟುಕೊಡಲಿಲ್ಲ. ರಾಜೀ ಮಾಡಿಕೊಂಡಿಲ್ಲ. ತಮ್ಮ ಸ್ಥಾನಮಾನ ಬಿಟ್ಟಿದ್ದಾರೆಯೇ ಹೊರತು, ತತ್ವವನ್ನು ಬಿಟ್ಟಿಲ್ಲ. ಹೋರಾಟದಿಂದಲೇ ರಾಜಕೀಯ ಅಸ್ವಿತ್ವ ಗಳಿಸಿಕೊಂಡವರು. ಸಮಾಜಕ್ಕೋಸ್ಕರ ಹಾಗೂ ಧರ್ಮಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡವರು. ಅವರು ಶತಾಯುಷಿಗಳಾಗಿ ಬದುಕಿ-ಬಾಳಲಿ.

ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಮಾದಾರ ಚೆನ್ನಯ್ಯ ಗುರುಪೀಠ.