ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನಲ್ಲಿ ಧಾರ್ಮಿಕವಾಗಿ ಹೆಚ್ಚು ಭಕ್ತಿಯುಳ್ಳ ಜನರು ಇರುವುದರಿಂದ ಪ್ರತಿ ಗ್ರಾಮದಲ್ಲೂ ದೇವಸ್ಥಾನಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಎಸ್. ಆರ್. ಶ್ರೀನಿವಾಸ್ ತಿಳಿಸಿದರು.ತಾಲೂಕಿನ ನಡುವಲಪಾಳ್ಯ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀಶನೈಶ್ವರ ಸ್ವಾಮಿಯ ದೇವಾಲಯದಲ್ಲಿ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಮೊದಲನೇ ಶನಿವಾರದ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾನೂ ಸಹ ಎಲ್ಲಾ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಸ್ವಾಮಿ ಆಶೀರ್ವಾದ ಪಡೆಯುತ್ತೇನೆ ಎಂದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ, ಸ್ವಾಮಿಯ ಪೂಜಾ ಕಾರ್ಯಕ್ರಮಗಳು 13 ವರ್ಷದಿಂದ ಹಿರಿಯರ ಮಾರ್ಗದರ್ಶನದಂತೆ ಶ್ರಾವಣ ಮಾಸದ ಮೊದಲನೇ ಶನಿವಾರ ವಿಶೇಷ ಪೂಜೆ ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.ಈ ದೇವಸ್ಥಾನಕ್ಕೆ ಚಿಕ್ಕೋನಹಳ್ಳಿ, ಗಂಟೆಪಾಳ್ಯ, ಜವರೇಗೌಡ ಪಾಳ್ಯ, ಮಡೇನಹಳ್ಳಿ ಕಡೇಪಾಳ್ಯ ಗ್ರಾಮಗಳ ಭಕ್ತಾದಿಗಳಿಂದ ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿವೆ ಎಂದರು.
ಗುಬ್ಬಿ ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಸಿ.ಬಸವರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಶನೈಶ್ವರಸ್ವಾಮಿಯ ದೇಗುಲದಲ್ಲಿ ದಾಸೋಹ ವಿಶೇಷವಾಗಿದ್ದು, ಮಧ್ಯಾಹ್ನದಿಂದ ಸಂಜೆವರೆಗೆ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿರುವುದಾಗಿ ತಿಳಿಸಿದರು.ಅರ್ಚಕ ಉಮೇಶ್ ಆಚಾರ್ ಮಾತನಾಡಿ, ಶನೈಶ್ವರ ಸ್ವಾಮಿಯ ಮಹಿಮೆಯಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ತಮ್ಮ ಹರಕೆ ತೀರಿಸಿ ಹೋಗುತ್ತಿದ್ದಾರೆ. ಶ್ರಾವಣ ಮಾಸದ ಮೊದಲನೇ ಶನಿವಾರದ ಅಂಗವಾಗಿ ಸ್ವಾಮಿಯವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ದೇವಾಲಯದಲ್ಲಿ ಯಾವುದೇ ಬೇಧ, ಭಾವವಿಲ್ಲದೆ ಸಾವಿರಾರು ಭಕ್ತರು ಬಂದು ಸ್ವಾಮಿ ಆಶೀರ್ವಾದ ಪಡೆಯುತ್ತಾರೆ ಎಂದರು.
ದೈವದರ್ಶನ ಪಡೆದ ಭಕ್ತಾದಿಗಳಿಗೆ ವಿಶೇಷವಾಗಿ ಮುದ್ದೆ, ಬೆರಕೆ ಕಾಳು ಸಾಂಬಾರ್ ಹಾಗೂ ಸಿಹಿ ಭಕ್ಷ್ಯ ನೀಡಲಾಯಿತು.ಯಜಮಾನರಾದ ಮುಳಕಟ್ಟಗೌಡರು, ಸಣ್ಣಸಿದ್ದೇಗೌಡರು, ರಾಜಣ್ಣಗೌಡರು, ಹೊನ್ನಪ್ಪಜ್ಜಿಗೌಡರು, ಲಕ್ಷ್ಮೀನರಸಿಂಹಯ್ಯಗೌಡರು, ಅರ್ಚಕರಾದ ನಾಗರಾಜಚಾರ್, ಮಗ ಗೌರಿಶಂಕರ್, ಗ್ರಾಮದ ಭಕ್ತರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಇದ್ದರು.