ಕಂಪ್ಲಿ: ಬುಕ್ಕಸಾಗರದ ಕರಿಸಿದ್ದೇಶ್ವರ ಮಠದಲ್ಲಿ ಶನಿವಾರ ಲಿಂ.ಕರಿಸಿದ್ದೇಶ್ವರರ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಸಾರುವ ವಿವಿಧ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.ಮುಗಳಕೋಡದ ಜಿಡಗಾ ಸುಕ್ಷೇತ್ರದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂ.ಕರಿಸಿದ್ದೇಶ್ವರ ಶಿವಾಚಾರ್ಯರು ಸದ್ಭಕ್ತರ ಹಿತ, ಸಮಾಜದ ಉತ್ಥಾನ ಹಾಗೂ ಕರಿಸಿದ್ದೇಶ್ವರ ಸಂಸ್ಥಾನ ಮಠದ ಅಭಿವೃದ್ಧಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ ಮಹಾನ್ ತ್ಯಾಗಿಗಳಾಗಿದ್ದಾರೆ. ಅವರು ಧರ್ಮ, ಸೇವೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಮಠವನ್ನು ಬಲಪಡಿಸಿ, ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಭಾಗವಾಗಿ ಮಠದ ಸೇವೆ ಹಾಗೂ ಸಮಾಜ ಸೇವೆಗೆ ಅಪಾರ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲಾಯಿತು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಶಾಲಾ ಕಟ್ಟಡಕ್ಕೆ ಸ್ಥಳದಾನ ಮಾಡಿದ ಹುಚ್ಚಮ್ಮ ಬಸಪ್ಪ ಚೌದ್ರಿ ಹಾಗೂ ಮಠದ ಸೇವೆಗಾಗಿ ಜೀವನವನ್ನೇ ಅರ್ಪಿಸಿದ್ದ ಮರೇಗೌಡ ಮಾಲಿಪಾಟೀಲರ ಮರಣೋತ್ತರ ಗೌರವವಾಗಿ ಅವರ ಪರವಾಗಿ ಶರಣಪ್ಪ ಮಾಲಿಪಾಟೀಲರಿಗೆ “ಕರಿಸಿದ್ದಶ್ರೀ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇದಲ್ಲದೆ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ಸಭೆಗೆ ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಾನುಕೋಟಿಮಠದ ಸಿದ್ದಲಿಂಗ ಶಿವಾಚಾರ್ಯರು, ಹೂವಿನಹಡಗಲಿಯ ಹಿರಿಯ ಶಾಂತವೀರಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಅಚಲೇರಿ ಹಿರೇಮಠದ ಸುಪ್ರೇಶ್ವರ ಶಿವಾಚಾರ್ಯರು, ಬೀಳಗಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಶಿವಾಚಾರ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್. ಗಣೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಐ. ಸಂಗನಬಸಪ್ಪ, ಪ್ರಮುಖರಾದ ಬಿ.ಎಲ್. ಸಂಯುಕ್ತರಾಣಿ, ಸಾಲಿ ಸಿದ್ದಯ್ಯ, ಸಾಲಿ ಬಸವರಾಜಸ್ವಾಮಿ, ಕಿಚಡಿ ಕೊಟ್ರೇಶ್, ಎಂ.ಎಸ್. ಶಶಿಧರಸ್ವಾಮಿ, ಚಂದ್ರಯ್ಯವಲ್ಲಭಾಪುರ, ವಿಶ್ವನಾಥಸ್ವಾಮಿ, ವೀರಯ್ಯಸ್ವಾಮಿ, ಎಸ್.ಡಿ. ಬಸವರಾಜ, ಗಂಗಾಧರಸ್ವಾಮಿ, ರುದ್ರಯ್ಯ, ಗುರುಶಾಂತ ಸೇರಿದಂತೆ ಅನೇಕ ಸದ್ಭಕ್ತರಿದ್ದರು.