ಪ್ರಶಾಂತ್ ಕೆಂಗನಹಳ್ಳಿ
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವಾರ ಕೆರೆ ಅಭಿವೃದ್ಧಿಗೆ ಬಿಡಿಎ ₹12.60 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ. ಹಾಗೂ ಪುರಸಭೆಯಿಂದ ₹2 ಕೋಟಿ ಅನುದಾನ ನೀಡಿದೆ.
105 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಗೆ 2010ರಿಂದ ವಸತಿ ಘಟಕಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಡಾ। ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿಯೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊಳಚೆಯಿಂದ ತುಂಬಿರುವ ಚಿಕ್ಕಬಾಣಾವರ ಕೆರೆ ಪುನರುಜ್ಜೀವನಗೊಳಿಸುವ ಕಾಮಗಾರಿಯನ್ನೂ ಆರಂಭಿಸಲಿದೆ.ಪುನರುಜ್ಜೀವನದ ಭಾಗವಾಗಿ ಬಿಡಿಎ ಕೆರೆಯ ತಳದಿಂದ ಹೂಳು ಅಥವಾ ಹೂಳು ಮಿಶ್ರಿತ ಮರಳನ್ನು ತೆಗೆದು ಅದನ್ನು ಸ್ಪಾಯ್ಲ್ ಬ್ಯಾಂಕ್ ಅಥವಾ ನಿಗದಿತ ಡಂಪ್ ಯಾರ್ಡ್‌ಗಳಲ್ಲಿ ಠೇವಣಿ ಮಾಡಲಿದೆ. ಏಜೆನ್ಸಿಯು ಠೇವಣಿ ಮಾಡಿದ ಹೂಳು ಅಥವಾ ಮರಳನ್ನು ವಿಲೇವಾರಿ ಮಾಡಲಿದೆ. ಕೆರೆಯ ಪರಿಧಿಯ ಉದ್ದಕ್ಕೂ ವಾಕ್‌ವೇ, ಮಣ್ಣಿನ ಒಡ್ಡು ನಿರ್ಮಿಸಲು ಬಿಡಿಎ ಯೋಜಿಸಿದೆ. ತ್ಯಾಜ್ಯ ನೀರನ್ನು ತಿರುಗಿಸುವ ಚರಂಡಿಯನ್ನು ನಿರ್ಮಿಸಲಾಗುತ್ತದೆ.
ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್ ಮಾತನಾಡಿ, ಕೆರೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಡಿಪಿಆರ್‌ಗೆ ಜಿಲ್ಲಾಧಿಕಾರಿಗಳ ಅನುಮೋದನೆ ಮತ್ತು ಪೌರಾಡಳಿತ ನಿರ್ದೇಶನಾಲಯದಿಂದ ಟೆಂಡರ್ ಆಗಿದೆ. ಈಗ ಕೆಲಸ ಪ್ರಾರಂಭಿಸಬೇಕಿದೆ. ಮೊದಲನೇ ಹಂತದಲ್ಲಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇತ್ತೀಚಿನ ಸರ್ವೆ ಪ್ರಕಾರ ಕೆರೆಯ ವಿಸ್ತೀರ್ಣ 105 ಎಕರೆ. ಅದರಲ್ಲಿ ಎರಡು ಎಕರೆಯಷ್ಟು ಒತ್ತುವರಿಯಾಗಿದೆ. ಒತ್ತುವರಿ ಜಾಗವನ್ನು ಗುರಿಸಲಾಗಿದೆ. ಕೆರೆಗೆ ಕಲುಷಿತ ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆ ಹಚ್ಚಿ ಅದನ್ನು ತಡೆಯಲಾಗುತ್ತದೆ. ಕೆರೆ ಮಣ್ಣು, ಕಲುಷಿತ ನೀರು ತೆಗೆದು ಸುತ್ತಲೂ ಸಂರಕ್ಷಣೆ ಮಾಡಿ ಸುಂದರ ಕೆರೆ ನಿರ್ಮಿಸಲಾಗುವುದು ಎಂದರು.
ಸ್ಥಳೀಯ ನಿವಾಸಿ ಚಿಕ್ಕಸ್ವಾಮಿ, ಕೆರೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಿ ಉಳಿಸಬೇಕಿದೆ. ಮಳೆ ಬಂದಾಗ ಕೆರೆ ಸುತ್ತಲಿನ ಮನೆಗಳಿಗೆ ನೀರು ನುಗ್ಗಲು ಕೆರೆ ಹಾಗೂ ರಾಜಕಾಲುವೆಯ ಒತ್ತುವರಿಯೇ ಕಾರಣವಾಗಿದೆ. ತ್ವರಿತಗತಿಯಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕಾಗಿದೆ ಎಂದರು.
ನವೀನ್ ಕುಮಾರ್ ಪರಿಸರ ಬಳಗ ಚಿಕ್ಕಬಾಣಾವರ