ಕೇಂದ್ರ ಲೋಕಸಭೇವಾ ಆಯೋಗ(ಯುಪಿಎಸ್ಸಿ) ನಡೆಸುವ ಐಎಎಸ್, ಐಪಿಎಸ್ ಮತ್ತಿತರ ಪರೀಕ್ಷೆಗಳು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕದ ವಿದ್ಯಾರ್ಥಿಗಳು ಉಳಿದುಕೊಂಡು ತಯಾರಾಗಲು ನವದೆಹಲಿಯಲ್ಲಿ ನೂತನವಾಗಿ ‘ಕರ್ನಾಟಕ ಭವನ-4’ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ
ಬೆಂಗಳೂರು : ಕೇಂದ್ರ ಲೋಕಸಭೇವಾ ಆಯೋಗ(ಯುಪಿಎಸ್ಸಿ) ನಡೆಸುವ ಐಎಎಸ್, ಐಪಿಎಸ್ ಮತ್ತಿತರ ಪರೀಕ್ಷೆಗಳು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕದ ವಿದ್ಯಾರ್ಥಿಗಳು ಉಳಿದುಕೊಂಡು ತಯಾರಾಗಲು ನವದೆಹಲಿಯಲ್ಲಿ ನೂತನವಾಗಿ ‘ಕರ್ನಾಟಕ ಭವನ-4’ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟದ ಒಪ್ಪಿಗೆ ದೊರಕಿದೆ.
ಸಂಪುಟ ಸಭೆಯ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯುಪಿಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹80.75 ಕೋಟಿ ವೆಚ್ಚದಲ್ಲಿ ಕರ್ನಾಟಕ ಭವನ-4 ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಶೇಕಡ 50, ಇತರೇ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ.50 ಮೀಸಲು ನೀಡಲಾಗುವುದು ಎಂದು ಹೇಳಿದರು.
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:
ಯಾದಗಿರಿಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ₹100 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ₹18 ಕೋಟಿ ವೆಚ್ಚದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆರು ಸಿವಿಲ್ ಕಾಮಗಾರಿಗಳಿಗೆ ಮತ್ತು ಬೆಂಗಳೂರು ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸುಮಾರು ₹60 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳಸಾಪೂರ ಗ್ರಾಮದಲ್ಲಿನ ಒಟ್ಟು 18 ಎಕರೆ ಜಮೀನಿನಲ್ಲಿ 50:50ರ ಅನುಪಾತದಲ್ಲಿ ರೈತರು ಹಾಗೂ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ₹19.69 ಕೋಟಿ ಅಂದಾಜು ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳುವುದು. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಜಮೀನಿನ ಪೈಕಿ ಸ್ವಯಂಪ್ರೇರಿತವಾಗಿ ಜಮೀನು ನೀಡಲು ರೈತರು ಮುಂದೆ ಬಂದಿದ್ದಾರೆ. ಇದಕ್ಕೆ ಇದ್ದ ಕಾಲಾವಕಾಶವನ್ನು ಬರುವ ಅ.31 ರವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ದೆಹಲಿ ಕಾನೂನು ವಿಭಾಗ ಸದೃಢಕ್ಕೆ ಕ್ರಮ:
ಸುಪ್ರೀಂ ಕೋರ್ಟಿನಲ್ಲಿರುವ ವ್ಯಾಜ್ಯಗಳ ಇತ್ಯರ್ಥಕ್ಕೆ ದೆಹಲಿಯ ರಾಜ್ಯ ಕಾನೂನು ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದೆಹಲಿಯ ರೆಸಿಡೆನ್ಸಿಯಲ್ ಕಮಿಷನರ್ ಕಚೇರಿ ಕಾರ್ಯವೈಖರಿ ನನಗೆ ಸಮಾಧಾನ ತಂದಿಲ್ಲ. ಆದ ಕಾರಣಕ್ಕೆ ಹೊಸ ತಂಡ ಸಮೀಕರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯಕ್ಕೆ ತರುವುದು ಹೇಗೆ? ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕು. ಬೇರೆ ಬೇರೆ ರಾಜ್ಯಗಳು ಯಾವ ಯೋಜನೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಮಗ್ರ ಮಾಹಿತಿ ನೀಡಲು ಅಧಿಕಾರಿಗಳ ತಂಡ ರಚಿಸಿ ನೇಮಕ ಮಾಡಲಾಗುತ್ತದೆ. ಇದೆಲ್ಲದಕ್ಕೂ ಸಭೆಯು ಸಮ್ಮತಿ ನೀಡಿದೆ ಎಂದು ತಿಳಿಸಿದರು.
ಈಗಾಗಲೇ ದೆಹಲಿಗೆ ತೆರಳಿ ಕರ್ನಾಟಕದ ಅಧಿಕಾರಿಗಳ ಸಭೆ ನಡೆಸಿ ಅವರ ಸಲಹೆ ಪಡೆದಿದ್ದೇನೆ. ಕರ್ನಾಟಕದ ಏಳಿಗೆಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇವರ ಜೊತೆಗೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ನಿವೃತ್ತ ಅಧಿಕಾರಿಗಳನ್ನು ಈ ತಂಡಕ್ಕೆ ನೇಮಕ ಮಾಡಲಾಗುವುದು ಎಂದರು.
ಐದು ಎಂಎಲ್‌ಸಿ ಸ್ಥಾನಗಳಿಗೆ
ನಾಮನಿರ್ದೇಶನ: ಸಿಎಂಗೆ ಹೊಣೆ
ಬರುವ ಜುಲೈನಲ್ಲಿ ಅವಧಿ ಮುಗಿಯಲಿರುವ ಐವರು ವಿಧಾನ ಪರಿಷತ್ ಸದಸ್ಯರ ಸ್ಥಾನಗಳಿಗೆ ಯಾರನ್ನು ನಾಮನಿರ್ದೇಶನ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಅವರಿಗೆ ವಹಿಸಿದೆ.
ಅವಧಿ ಮುಗಿಯುವ ಸ್ಥಾನಗಳಿಗೆ ಸರ್ಕಾರದಿಂದ ಹೊಸದಾಗಿ ನಾಮನಿರ್ದೇಶನ ನಡೆಯಬೇಕಿದೆ. ಯಾರನ್ನು ನಾಮನಿರ್ದೇಶನ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಹಾಗೂ ವಿವಿಧ ಸಂಪುಟ ಉಪಸಮಿತಿಗಳಲ್ಲಿ ಹೊಸಬರ ನೇಮಕ ವಿಚಾರವನ್ನೂ ತಮಗೆ ವಹಿಸಿದೆ. ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಸಂಪುಟ ಪುನಾರಚನೆ ಬಳಿಕ ಹೆಚ್ಚಿನ ಜವಾಬ್ದಾರಿ ವಹಿಸಲಾಗುವುದು. ಅಲ್ಲಿಯವರೆಗೆ ಹಾಲಿ ಇರುವ ಸಚಿವರೇ ತಮ್ಮ ಅಕ್ಕಪಕ್ಕದ ಜಿಲ್ಲೆಗಳ ಸಮಸ್ಯೆಗಳನ್ನೂ ನೋಡಿಕೊಳ್ಳುವಂತೆ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿವರಿಸಿದರು.
ಉಳಿದ ಪ್ರಮುಖ ನಿರ್ಧಾರಗಳು
- ಗದಗ ಬೆಟಗೇರಿಯ ಕಳಸಾಪುರ ಗ್ರಾಮದ ವಸತಿ ಯೋಜನೆಗೆ ಒಪ್ಪಿಗೆ
- ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ತೀರ್ಮಾನ
- ದೆಹಲಿಯ ರಾಜ್ಯ ಕಾನೂನು ವಿಭಾಗ ಇನ್ನಷ್ಟು ಸದೃಢಗೊಳಿಸಲು ನಿರ್ಧಾರ
- ಬೆಂ.ಗ್ರಾ. ಚನ್ನರಾಯಪಟ್ಟಣ ರೈತರು ಭೂಮಿ ನೀಡಲು ಕಾಲಾವಕಾಶ ವಿಸ್ತರಣೆ
