14 ಗ್ರಾಮಪಂಚಾಯತಿಗಳು ವಿಲೀನ: ಡಾ. ಜಿ. ಪರಮೇಶ್ವರ್

KannadaprabhaNewsNetwork | Published : May 18, 2025 11:52 PM
Follow Us

ಸಾರಾಂಶ

ತುಮಕೂರು ನಗರದ ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ 14 ಗ್ರಾಮ ಪಂಚಾಯತಿಗಳನ್ನು ತುಮಕೂರು ನಗರಕ್ಕೆ ವಿಲೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ನಗರದ ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ 14 ಗ್ರಾಮ ಪಂಚಾಯತಿಗಳನ್ನು ತುಮಕೂರು ನಗರಕ್ಕೆ ವಿಲೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.ಮಹಾನಗರಪಾಲಿಕೆ ಆವರಣದಲ್ಲಿ ನಗರದ ಜಿಲ್ಲಾಸ್ಪತ್ರೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್, ಮಹಾನಗರ ಪಾಲಿಕೆ ಆವರಣದಲ್ಲಿ ಶಿಶುಪಾಲನಾ ಕೇಂದ್ರ, ಅಕ್ಕಾ ಕೆಫೆ ಹಾಗೂ ಮಹಾನಗರ ಪಾಲಿಕೆ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.ಬೆಂಗಳೂರಂತೆ ತುಮಕೂರೂ ಸಹ ಬೆಳೆಯಬೇಕು. ಬೆಂಗಳೂರು ಮಹಾನಗರ ಪಾಲಿಕೆ ಈಗ ಗ್ರೇಟರ್ ಬೆಂಗಳೂರು ಆಗಲಿದೆ. ಅದರಂತೆ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ಬೆಳವಣಿಗೆಗೆ ಇನ್ನಷ್ಟು ವೇಗ ನೀಡಬೇಕು ಈ ನಿಟ್ಟಿನಲ್ಲಿ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕೆಂಬ ಉದ್ದೇಶದಿಂದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಾದಾವರದಿಂದ ಶಿರಾಗೇಟ್‌ವರೆಗೂ ಒಟ್ಟು 52 ಕಿ.ಮೀ. ಮೆಟ್ರೋ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಗರದ ಕೆಲ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಡಾ: ಜಿ.ಪರಮೇಶ್ವರ್ ಅವರು, ನಗರ ಪಾಲಿಕೆಗೆ ಬೇಕಿರುವ ಪೌರ ಕಾರ್ಮಿಕರನ್ನು, ವಾಹನಗಳನ್ನು ನೀಡಿದ್ದೇವೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ ಕಸ ಹಾಗೇ ಇದೆ. ಸ್ವಚ್ಛತೆ ಮಾಡುತ್ತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ನಗರದಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷಿಸಕೂಡದು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸೇರಿ ಕ್ಲೀನ್‌ಸಿಟಿಯನ್ನಾಗಿ ನಿರ್ಮಿಸಲು ಶ್ರಮಿಸಬೇಕು. ನಗರದಲ್ಲಿ ಗಿಡ ನೆಡುವ ಕಾರ್ಯ ಆಗಬೇಕು ಎಂದರು.ರಾಜ್ಯದಲ್ಲಿ ಗಣಿಗಾರಿಕೆ ನಡೆದ ಪ್ರದೇಶಗಳಲ್ಲಿ ಸರ್ಕಾರ ಸೆಸ್ ಸಂಗ್ರಹಿಸಲಾಗಿದ್ದು, ಆ ಸೆಸ್ ಹಣದಲ್ಲಿ ತುಮಕೂರಿಗೆ ೨೫೦೦ ಕೋಟಿ ರು. ಬಂದಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಅಭಿವೃದ್ಧಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಈ ಹಣವನ್ನು ಬಳಸಲಾಗುತ್ತದೆ ಎಂದು ತಿಳಿಸಿದರು. ನಗರಪಾಲಿಕೆಯಲ್ಲಿ ಈವರೆಗೂ ಶೇ. 46ರಷ್ಟು ಜನ ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆಯಿಂದ 36 ಕೋಟಿ ರು. ಸಂಗ್ರಹವಾಗಿರುವುದು ಅಭಿನಂದನಾರ್ಹ. ಉಳಿಕೆ ಶೇ.54 ರಷ್ಟು ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ವಿಸ್ತರಣೆಗಾಗಿ ಗೃಹಸಚಿವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಮ್ಮತಿ ಇರುತ್ತದೆ. ಅಮಾನಿಕೆರೆ, ಕ್ರೀಡಾಂಗಣ ಸೇರಿದಂತೆ ಇನ್ನಿತರೆ ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ನಗರಪಾಲಿಕೆ ಆಯುಕ್ತರಾದ ಬಿ.ವಿ. ಅಶ್ವಿಜಾ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ೨ ಇಂದಿರಾ ಕ್ಯಾಂಟೀನ್, ಮಹಾನಗರ ಪಾಲಿಕೆಯಲ್ಲಿ ದುಡಿಯುವ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ಸ್ಥಾಪಿಸಲಾಗಿದೆ. ಶಿಶು ಪಾಲನಾ ಕೇಂದ್ರದಲ್ಲಿ 30 ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ ಎಂದರು.