ಕೊಡಗು ಕಲಾವಿದರ ಸಂಘದಿಂದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

KannadaprabhaNewsNetwork | Published : May 18, 2025 11:52 PM

ಸಂಗೀತ ಕಲಾವಿದ ಮತ್ತು ಸಾಹಿತಿ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಮೇ 20ರಂದು ಸನ್ಮಾನಿಸಿ ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಖ್ಯಾತ ಸಂಗೀತ ಕಲಾವಿದ ಹಾಗೂ ಸಾಹಿತಿ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಮೇ 20 ರಂದು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಕಲಾವಿದರ ಸಂಘ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಕಲಾವಿದರಿದ್ದು, ಪ್ರಸ್ತುತ ಚೆಕ್ಕೆರ ತ್ಯಾಗರಾಜ ಅವರನ್ನು ಸನ್ಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಮೇ 20 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಕೊಡವ ಸಮಾಜದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ಚೆಕ್ಕೆರ ತ್ಯಾಗರಾಜ ಅವರು ಖ್ಯಾತ ಸಂಗೀತ ಕಲಾವಿದರಾಗಿದ್ದಾರೆ, ಹಾರ್ಮೋನಿಯಂ ವಾದಕರಾಗಿದ್ದಾರೆ. ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ, ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ಮಾತ್ರವಲ್ಲದೆ ಸಾಹಿತಿಯೂ ಆಗಿದ್ದು, 22 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಕಲಾವಿದರ ಸಂಘ ಸನ್ಮಾನಿಸುತ್ತಿದೆ ಎಂದು ತಿಳಿಸಿದರು.

ಕಲಾವಿದರ ಸಂಘ ಚಿತ್ರ ನಿರ್ದೇಶಕ ಎ.ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರವನ್ನು ಇತ್ತೀಚೆಗೆ ವಿರಾಜಪೇಟೆಯಲ್ಲಿ ನಡೆಸಿತು. ಮುಂದಿನ ದಿನಗಳಲ್ಲಿ ಹಿರಿಯರನ್ನು ಸನ್ಮಾನಿಸುವುದು ಸೇರಿದಂತೆ ಕಲಾವಿದರಿಗೆ ಸ್ಫೂರ್ತಿ ತುಂಬುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

ಸಂಘದ ಉಪಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕಲಾವಿದರ ಸಂಘ ಕಳೆದ 4 ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿರುವ ಕಲಾವಿದರು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಲೆಯ ಕುರಿತು ತರಬೇತಿ ಶಿಬಿರ:

ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಸಕ್ರಿಯಗೊಳಿಸಿ ಕಲೆಯ ಕುರಿತು ತರಬೇತಿ ಶಿಬಿರಗಳನ್ನು ನಡೆಸಲಾಗುವುದು, ವಿದ್ಯಾರ್ಥಿಗಳಿಗೆ ವಿವಿಧ ಕಲಾ ಪ್ರಕಾರಗಳನ್ನು ಹೇಳಿಕೊಡಲಾಗುವುದು ಎಂದರು.

ಮೇ 20 ರಂದು ಮೈಸೂರಿನಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಕೊಡಗಿನ ಕಲಾವಿದರೆಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕಲಾವಿದ ಚೆಕ್ಕೆರ ತ್ಯಾಗರಾಜ ಅವರು ಅನಾರೋಗ್ಯದಲ್ಲಿದ್ದರೂ ಸಂಗೀತದ ಮೇಲಿನ ಅಭಿಮಾನವನ್ನು ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಗೀತವನ್ನು ನೀಡಿ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದಾರೆ, ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘ ಸನ್ಮಾನಿಸುತ್ತಿರುವುದು ಶ್ಲಾಘನೀಯ:

ನಿರ್ದೇಶಕ ಬಿ.ಜಿ.ಅನಂತಶಯನ ಮಾತನಾಡಿ ಸಂಗೀತವನ್ನು ಅತಿಯಾಗಿ ಪ್ರೀತಿಸುವ ಚೆಕ್ಕೆರ ತ್ಯಾಗರಾಜ ಅವರು ಮಾಜಿ ಸೈನಿಕರೂ ಆಗಿದ್ದು, ಯುದ್ಧದ ವಾತಾವರಣದ ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಹಾಗೂ ಮಾಜಿ ಸೈನಿಕರೊಬ್ಬರನ್ನು ಕಲಾವಿದರ ಸಂಘ ಸನ್ಮಾನಿಸುತ್ತಿರುವುದು ಶ್ಲಾಘನೀಯ ಮತ್ತು ಉತ್ತಮ ಆಯ್ಕೆ ಕೂಡ ಎಂದರು.

ಹಾರ್ಮೋನಿಯಂ ನುಡಿಸುತ್ತಾ ಸಂಗೀತದಲ್ಲಿ ಸಂಪೂರ್ಣವಾಗಿ ಮೈಮರೆತು ಬಿಡುವ ತ್ಯಾಗರಾಜ ಅವರು ದೇವರ ಹಾಡುಗಳನ್ನು ಹೇಳುವ ಸಂದರ್ಭ ಭಕ್ತಿಪರವಶರಾಗಿ ಬಿಡುತ್ತಾರೆ. ಇಂತಹ ಕಲಾವಿದನನ್ನು ಸನ್ಮಾನಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಬಿದ್ದಂಡ ಉತ್ತಮ್ ಪೊನ್ನಪ್ಪ ಹಾಗೂ ಆಚೆಯಡ ಗಗನ್ ಗಣಪತಿ ಉಪಸ್ಥಿತರಿದ್ದರು.