ಹಾವೇರಿ:ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದೀರ್ಘ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರು. ದರ ನಿಗದಿಪಡಿಸುವ ಮೂಲಕ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ಹಗ್ಗಜಗ್ಗಾಟದಿಂದ ಸುದೀರ್ಘ 14 ಗಂಟೆಗಳ ಕಾಲ ನಡೆದ ಮ್ಯಾರಾಥಾನ್ ಸಭೆ ಅಂತೂ ಸುಖಾಂತ್ಯ ಕಾಣುವಲ್ಲಿ ಯಶಸ್ವಿಯಾಯಿತು.
ಕಬ್ಬು ಬೆಳೆಗಾರರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯದಿದ್ದರೆ, ಕಾರ್ಖಾನೆ ಮಾಲೀಕರು ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿದ್ದರು. ಹೀಗಾಗಿ ಸಭೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆದರೂ ಒಮ್ಮತ ಮೂಡಿರಲಿಲ್ಲ. ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ 3,225 ರು. ನೀಡಲು ಒಪ್ಪಂದ ಮಾಡಿಕೊಳ್ಳಲಾಯಿತು.
ಒಮ್ಮತದ ನಿರ್ಧಾರ: ಆರಂಭದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 3,600 ರು. ನೀಡಬೇಕೆಂದು ಪಟ್ಟು ಹಿಡಿದಿದ್ದರು. ಕನಿಷ್ಠ ₹ 3,300 ದರವಾದರೂ ನಿಗದಿಪಡಿಸಲೇಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದರು. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹ 3,150ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ಆರ್ಥಿಕ ಲೆಕ್ಕಾಚಾರದ ನಡುವಿನ ಅಂತರ ಕಡಿಮೆ ಮಾಡಲು ಸಚಿವರು ಹಾಗೂ ಜಿಲ್ಲಾಡಳಿತ ಹಲವು ಸುತ್ತಿನ ಚರ್ಚೆ ನಡೆಸಿತು. ಕೊನೆಗೆ ಎರಡೂ ಕಡೆಯವರನ್ನು ಒಪ್ಪಿಸಿ ₹ 3,225 ದರಕ್ಕೆ ಒಮ್ಮತಕ್ಕೆ ಬರಲಾಯಿತು.ರಿಕವರಿ ಪ್ರಮಾಣದ ನೆಪ: ಕಬ್ಬಿನ ದರ ನಿಗದಿ ವಿಚಾರದಲ್ಲಿ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ (ರಿಕವರಿ) ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ಬೆಳಗಾವಿ ಭಾಗದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ.11ಕ್ಕಿಂತ ಹೆಚ್ಚಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ರಿಕವರಿ ಪ್ರಮಾಣ ಶೇ.9.44ರಷ್ಟಿದೆ. ಹೀಗಾಗಿ ಬೆಳಗಾವಿ ಭಾಗದ ದರವನ್ನು ಹಾವೇರಿಗೂ ಅನ್ವಯಿಸಲು ಸಾಧ್ಯವಿಲ್ಲ ಎಂಬುದು ಕಾರ್ಖಾನೆ ಮಾಲೀಕರ ವಾದವಾಗಿತ್ತು. ಕಡಿಮೆ ರಿಕವರಿ ಪ್ರಮಾಣವನ್ನು ಮುಂದಿಟ್ಟುಕೊಂಡು ಹೆಚ್ಚಿನ ದರ ನೀಡಲು ಮಾಲೀಕರು ಹಿಂದೇಟು ಹಾಕಿದ್ದರು. ಇದಕ್ಕೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಬೆಳೆಗಾರರ ಶ್ರಮ ಹಾಗೂ ಉತ್ಪಾದನಾ ವೆಚ್ಚ ಪರಿಗಣಿಸಿ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಹಲವು ಹೋರಾಟಗಳ ಬಳಿಕ ಸಿಕ್ಕ ಫಲ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ಜಿಲ್ಲೆಯ ರೈತರು ಹಲವು ತಿಂಗಳಿಂದ ಹಂತ ಹಂತವಾಗಿ ಹೋರಾಟ ನಡೆಸುತ್ತಿದ್ದರು. ಬಂಕಾಪುರ ಟೋಲ್‌ಗೇಟ್ ಬಳಿ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಹುಬ್ಬಳ್ಳಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಕಬ್ಬಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಹಾವೇರಿ ಬಂದ್ ಕೂಡ ನಡೆಸಿದ್ದರು. ಈ ಹಿಂದೆ ಎರಡು ಬಾರಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆದಿದ್ದರೂ ದರದ ವಿಚಾರದಲ್ಲಿ ಒಮ್ಮತ ಮೂಡಿರಲಿಲ್ಲ. ಇದರಿಂದ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. ಅಂತಿಮವಾಗಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದೀರ್ಘ ಸಭೆ ರೈತರ ಬೇಡಿಕೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಯಿತು.