ಶಾಲೆಗೆ ಕಾಯಂ ಮುಖ್ಯ ಶಿಕ್ಷಕರನ್ನು ನೇಮಕ ಮಾಡುವುದು ಸೇರಿದಂತೆ ಶಾಲೆಯಲ್ಲಿನ ಶೈಕ್ಷಣಿಕ ವಾತಾವರಣವನ್ನು ಸುಧಾರಿಸುವಂತೆ ಆಗ್ರಹಿಸಿ ಕದರಮಂಡಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬ್ಯಾಡಗಿ: ಶಾಲೆಗೆ ಕಾಯಂ ಮುಖ್ಯ ಶಿಕ್ಷಕರನ್ನು ನೇಮಕ ಮಾಡುವುದು ಸೇರಿದಂತೆ ಶಾಲೆಯಲ್ಲಿನ ಶೈಕ್ಷಣಿಕ ವಾತಾವರಣವನ್ನು ಸುಧಾರಿಸುವಂತೆ ಆಗ್ರಹಿಸಿ ಕದರಮಂಡಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ ಶಾಲೆ ಆರಂಭಕ್ಕೂ ಮುನ್ನವೇ ಶಾಲೆಗೆ ಆಗಮಿಸಿದ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು ಹಾ ಗೂ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ಕೂರಿಸಿ ಬೀಗ ಜಡಿದರು. ಶಾಲೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಹಾಗೂ ಶಾಲೆಗೆ ಬೀಗ ಜಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಇಒ ಸುರೇಂದ್ರ ತಹಸೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರು. ಈ ವೇಳೆ ಬಿಇಒ, ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಎಸ್ಡಿಎಂಸಿ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ.ಅಧ್ಯಕ್ಷ ಗದಿಗೆಪ್ಪ ಹಿರೇಮಠ, ಶಿಥಿಲಾವಸ್ಥೆ ತಲುಪಿದ್ದ ಕದರಮಂಡಲಗಿ ಗ್ರಾಮದ ಎಂಪಿಎಸ್ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ಸುಮಾರು ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿದ್ದೇವೆ. ಆದರೆ ಕಳೆದೊಂದು ವರ್ಷದಿಂದ ಶಾಲೆಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.ಕಾಯಂ ಶಿಕ್ಷಕರ ನೇಮಕ ಯಾಕಿಲ್ಲ?
ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಮಾಲತೇಶ ಬಡಿಗೇರ ಮಾತನಾಡಿ, ಶಾಲೆಯಲ್ಲಿ ಈ ಹಿಂದಿನ ಮುಖ್ಯ ಶಿಕ್ಷಕರನ್ನು ಸಹ ಪ್ರತಿಭಟನೆ ಮಾಡಿಯೇ ಶಾಲೆಯಿಂದ ಕಳಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ದುರಂತ, ಹಳೆಯ ಮುಖ್ಯ ಶಿಕ್ಷಕರು ಹೊರಹೋದ ಬಳಿಕ ತಾತ್ಕಾಲಿಕವಾಗಿ 15 ದಿನಗಳ ಮಟ್ಟಿಗೆ ಒಬ್ಬ ಶಿಕ್ಷಕರನ್ನ ನೇಮಕ ಮಾಡಲಾಗಿದ್ದು. ಇಲ್ಲಿಗೆ ಆರು ತಿಂಗಳು ಕಳೆದರು ಕಾಯಂ ಮುಖ್ಯ ಶಿಕ್ಷಕರನ್ನು ನೇಮಕ ಮಾಡಲು ಇಲಾಖೆಗೆ ಸಾಧ್ಯವಾಗಿಲ್ಲ ಎಂದರು.ಈ ವೇಳೆ ಮಾತನಾಡಿದ ಬಿಇಒ ಸುರೇಂದ್ರ ತಹಸೀಲದವರ, ತಾನು ತಾಲೂಕಿಗೆ ಹೊಸದಾಗಿ ಆಗಮಿಸಿದ್ದು, ಶಾಲೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ಹಂತಹಂತವಾಗಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.
ಈ ವೇಳೆ ಅಕ್ಷರದಾಹೋಹಾಧಿಕಾರಿ ವಸಂತ ಬೀರಣ್ಣನವರ, ಕ್ಷೇತ್ರ ಸಮನ್ವಾಧಿಕಾರಿ ಎಂ.ಎಫ್. ಹುಲ್ಯಾಳ, ಸಿಆರ್ಪಿ ಕೆ.ಎನ್. ಗೆಜ್ಜಿ ಸೇರಿದಂತೆ ಮಾರುತಿರಾಯ, ಮಂಜು ಯಲಿಗಾರ, ಪ್ರಶಾಂತ ಹಿತ್ತಲಮನಿ, ಗೋವಿಂದಪ್ಪ ನಾಯ್ಕರ. ಮಾಲತೇಶ ಕಾಯಕದ, ರವಿಲಿಂಗಾರೆಡ್ಡಿ, ರಾಘವೇಂದ್ರ ಸಾಲಿ, ಹೇಮಕ್ಕ ಹಿತ್ತಲಮನಿ ಸೇರಿದಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರತಿಭಟನೆ ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಡಿಡಿಪಿಐ ಮೋಹನ ದಂಡಿನ್ ಮುಂದಿನ ಮೂರು ದಿನಗಳೊಳಗಾಗಿ ಶಾಲೆಗೆ ಪುರುಷ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿಕೊಡುವುದಾಗಿ ಲಿಖಿತ ಭರವಸೆ ನೀಡಿದ ನಂತರ. ಬಳಿಕ ಪ್ರತಿಭಟನಾಕಾರರು ಶಾಲೆಯ ಬೀಗ ತೆರೆಯಲು ಒಪ್ಪಿಗೆ ಸೂಚಿಸಿ ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಕಳುಹಿಸಿದರು.