ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರು. ದರ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಈ ದರ ನೀಡಲು ಒಪ್ಪಿಕೊಂಡಿದ್ದಾರೆ.

ಹಾವೇರಿ: ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರು. ದರ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಈ ದರ ನೀಡಲು ಒಪ್ಪಿಕೊಂಡಿದ್ದಾರೆ. ರೈತರು ಕೂಡ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ದರಕ್ಕೆ ತಾತ್ಕಾಲಿಕ ಒಪ್ಪಿಗೆ ಸೂಚಿಸಿ ಚಳವಳಿಯನ್ನು ಹಿಂಪಡೆದಿದ್ದಾರೆ ಎಂದು ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರ ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಅವರು, ನಿರಂತರವಾಗಿ ಹಲವು ಗಂಟೆಗಳ ಕಾಲ ಸಭೆ ನಡೆಯಿತು. ಕಾರ್ಖಾನೆ ಮಾಲೀಕರು ಹಾವೇರಿ ಜಿಲ್ಲೆಯ ಕಬ್ಬಿನ ರಿಕವರಿ ಪ್ರಮಾಣ ಕೇವಲ ಶೇ.9.4ರಷ್ಟಿದೆ ಎಂದು ವಾದಿಸಿದರು. ಹೀಗಾಗಿ ಪ್ರತಿ ಟನ್ ಕಬ್ಬಿಗೆ 3,100ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ರೈತರು ಹೆಚ್ಚಿನ ದರ ನೀಡಬೇಕೆಂದು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದರು. ಕೊನೆಗೆ ಸಚಿವ ರುದ್ರಪ್ಪ ಲಮಾಣಿ ಅವರು ಸಭೆಯಲ್ಲಿ ಕೈಮುಗಿದು ಮನವಿ ಮಾಡಿಕೊಂಡರು. ಬೆಳಗ್ಗೆಯಿಂದ ಸಭೆ, ಹೋರಾಟದಲ್ಲಿ ತೊಡಗಿದ್ದ ರೈತರು ಕೂಡ ಹೈರಾಣಾಗಿದ್ದರು. ಈ ಹಿನ್ನೆಲೆಯಲ್ಲಿ 3,225 ದರಕ್ಕೆ ತಾತ್ಕಾಲಿಕವಾಗಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಬೆಳಗಾವಿ ಭಾಗದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ.11ಕ್ಕಿಂತ ಹೆಚ್ಚಿದೆ. ಆದರೆ ಹಾವೇರಿಯಲ್ಲಿ ಶೇ.9.4 ಇದೆ ಎಂದು ಕಾರ್ಖಾನೆಗಳು ಹೇಳುತ್ತಿವೆ. ರಿಕವರಿ ಪ್ರಮಾಣದ ಲೆಕ್ಕಾಚಾರದಲ್ಲಿ ರೈತರಿಗೆ ಅನುಮಾನಗಳಿದ್ದು, ಈ ವಿಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಬೇರೆ ದಾರಿ ಇಲ್ಲದ ಕಾರಣ ಸದ್ಯದ ದರಕ್ಕೆ ಒಪ್ಪಿಗೆ ನೀಡಿದ್ದೇವೆ. ಆದರೆ ಇದು ಅಂತಿಮ ಪರಿಹಾರವಲ್ಲ. ಮುಂಬರುವ ಅಧಿವೇಶನದಲ್ಲಿಯೂ ಕಬ್ಬಿನ ದರ ಹಾಗೂ ರಿಕವರಿ ವಿಚಾರವಾಗಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ತೂಕದಲ್ಲಿ ಮೋಸ ತಡೆಗೆ ಆಗ್ರಹ..

ಕಬ್ಬು ತೂಕ ಮಾಡುವ ಸಂದರ್ಭದಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂಬ ದೂರುಗಳಿದ್ದು, ಇದನ್ನು ಸರಿಪಡಿಸಲು ಸಚಿವರಿಗೆ ಮನವಿ ಮಾಡಲಾಗಿದೆ. ಕಬ್ಬಿನ ನಿಜವಾದ ರಿಕವರಿ ಪ್ರಮಾಣ ತಿಳಿಯಲು ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಬೇಕು. ಇದಕ್ಕಾಗಿ 500ಕೋಟಿ ರು. ಅನುದಾನ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ. ರೈತರಿಗೆ ನ್ಯಾಯ ದೊರೆಯಬೇಕಾದರೆ ಕಬ್ಬಿನ ತೂಕ ಹಾಗೂ ರಿಕವರಿ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇರಬೇಕು ಎಂದರು.