ಇಂದಿನಿಂದ ಶ್ರೀ ನಾಗಲಿಂಗ ಅಜ್ಜನ 144ನೇ ಆರಾಧನಾ ಮಹೋತ್ಸವ

KannadaprabhaNewsNetwork |  
Published : Jun 29, 2025, 01:36 AM IST
28ಎಚ್‌ಯುಬಿ24ನವಲಗುಂದ ಶ್ರೀ ನಾಗಲಿಂಗಜ್ಜನ ಮಠದಲ್ಲಿರುವ ಮುಸ್ಲಿಂ ಪಂಜಾಗಳು. | Kannada Prabha

ಸಾರಾಂಶ

ಜೂ. 29 ರಂದು 144ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ನೆರವೇರಲಿದೆ. ಜೂ. 30ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಧಾರ್ಮಿಕ ಸಭೆಯಲ್ಲಿ ದೃಷ್ಟಿ ಚೇತನ (ಅಂಧ) ರಥಶಿಲ್ಪಿಗಳಾದ ಸುರೇಶ ಹಾಗೂ ಮಹೇಶ ಬಡಿಗೇರ ಅವರಿಗೆ ‘ಶ್ರೀ ನಾಗಲಿಂಗ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಫಕೃದ್ದೀನ್ ಎಂ.ಎನ್.

ನವಲಗುಂದ: ಹಲವಾರು ಲೀಲೆ, ಪವಾಡಗಳಿಂದ ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡ ಮಹಾತ್ಮರಲ್ಲಿ ಪಟ್ಟಣದ ಶ್ರೀ ಅಜಾತ ನಾಗಲಿಂಗಸ್ವಾಮಿಗಳು ಒಬ್ಬರಾಗಿದ್ದಾರೆ.

ನಾಗಲಿಂಗಸ್ವಾಮಿ ಮಠ ಹಿಂದೂಗಳ ಮಠವಾದರೂ ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೆಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳನ್ನು ದಿನನಿತ್ಯ ಪೂಜಿಸುತ್ತಾರೆ.

ಶ್ರೀ ಅಜಾತ ನಾಗಲಿಂಗ ಮಹಾಸ್ವಾಮೀಜಿ ರಾಜ್ಯದಲ್ಲಿ ಸಂಚರಿಸುತ್ತ ನವಲಗುಂದಕ್ಕೆ ಆಗಮಿಸಿದಾಗ ಇಲ್ಲಿಯ ಮೌನೇಶ್ವರನ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದಾಗ ಆರೈಕೆ ಮಾಡಲು ಬಂದ ಸಮಗಾರ ಭೀಮವ್ವನ ಎದೆ ಹಾಲನ್ನು ಕುಡಿದು ಮಹಿಮೆಯನ್ನು ಮೆರೆದವರು.

ಭೀಮವ್ವನ ಭಕ್ತಿಯನ್ನು ಪರೀಕ್ಷಿಸಲು ಭೀಮ್ಮವ್ವನಿಗೆ ಬೆತ್ತಲೆಯಾಗಿ ಪೇಟೆಗೆ ಹೋಗಿ ಹಣ್ಣು-ಹಂಪಲು ತರಲು ಆಜ್ಞಾಪಿಸಿದರು. ಪರಮಭಕ್ತೆ ಭೀಮವ್ವ ನಾಗಲಿಂಗಸ್ವಾಮಿಗಳ ಹೇಳಿದಂತೆ ಪೇಟೆಗೆ ಬೆತ್ತಲೆಯಾಗಿಯೇ ಹೋದಳು, ಆದರೆ, ನೋಡುವವರ ಕಣ್ಣಿಗೆ ಮಾತ್ರ ಆಕೆ ಜರ್ದಾರಿ ಸೀರೆ, ಪೀತಾಂಬರ ಧರಿಸಿದಂತೆ ಕಂಡು ಬಂದ ಅಂದೊಂದು ಪವಾಡವಾಗಿ ಭಕ್ತರು ಆಶ್ಚರ್ಯಚಕಿತರಾದರು.

ಬ್ರಿಟಿಷರ ಕಾಲದಲ್ಲಿ ಅವರು ತಮ್ಮ ಬೈಬಲ್ ಪ್ರಚಾರ ಮಾಡಲು ಮುಷ್ಟಿಗಿರಿ ಕಾಳಪ್ಪನಿಗೆ ನೀಡಿದ್ದರು. ಗ್ರಾಮದೇವತೆ ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗಸ್ವಾಮಿಗಳು ಆಗಮಿಸಿದ್ದನ್ನು ನೋಡಿ ಬೈಯುತ್ತಾರೆಂದು ಬೈಬಲ್‍ ಅನ್ನು ಮುಚ್ಚಿಟ್ಟಿದ್ದರು. ಬೈಬಲ್‍ನ್ನು ಅಜ್ಜನವರು ತರೆಸಿಕೊಂಡು ಅದಕ್ಕೆ ರಂದ್ರಹಾಕಿ ಆ ರಂದ್ರಮುಚ್ಚಿದಾಗ ಮತ್ತೆ ಆವತರಿಸಿ ಬರುವೆನೆಂದು ಹೇಳಿದ್ದಾರೆ. ಇವತ್ತಿಗೂ ಆ ಬೈಬಲ್ ಶ್ರೀ ಮಠದಲ್ಲಿ ನಿತ್ಯ ಪೂಜೆಯಾಗುತ್ತದೆ. ಸಾರ್ವಜನಿಕರಿಗೆ ಗದ್ದುಗೆ ಪೂಜೆಯ ಮೊದಲು ಬೈಬಲ್‌ ನೋಡಲು ಲಭ್ಯವಿದೆ.

ಹೊಸಳ್ಳಿ ಬೂದಿಸ್ವಾಮಿಗಳು, ಗರಗದ ಮಡಿವಾಳಜ್ಜನವರು, ಹುಬ್ಬಳ್ಳಿಯ ಸಿದ್ದಾರೂಢರು, ಶಿಶುನಾಳ ಶರೀಫರು ಮೊದಲಾದ ಶರಣರು ಹಾಗೂ ಸಂತ ಮಹಾಪುರುಷರೊಡಗೂಡಿ ಸಾಕಷ್ಟು ಪವಾಡ ಮಾಡಿದ್ದು, ಇತಿಹಾಸದಿಂದ ಕೇಳಿ ಬರುತ್ತದೆ. ಅಂತಹ ಮಹಾಮಹಿಮನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ-ಶ್ರದ್ಧೆಗಳ ಸಮ್ಮೇಳನವಾಗಿದೆ. ಇಂದು ಆರಾಧನಾ ಮಹೋತ್ಸವ: ಜೂ. 29 ರಂದು 144ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ನೆರವೇರಲಿದೆ. ಜೂ. 30ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಧಾರ್ಮಿಕ ಸಭೆಯಲ್ಲಿ ದೃಷ್ಟಿ ಚೇತನ (ಅಂಧ) ರಥಶಿಲ್ಪಿಗಳಾದ ಸುರೇಶ ಹಾಗೂ ಮಹೇಶ ಬಡಿಗೇರ ಅವರಿಗೆ ‘ಶ್ರೀ ನಾಗಲಿಂಗ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಾತ್ರಾ ಮಹೋತ್ಸವದ ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ವೆಬ್‍ಸೈಟ್, ದೂರವಾಣಿ, 08380-295144 ಮೊ: 9480033134. 8660326805. ಸಂಪರ್ಕಿಸಬಹುದು ಎಂದು ಆರಾಧನಾ ಮಹೋತ್ಸವ ಸಮಿತಿಯವರು ತಿಳಿಸಿದ್ದಾರೆ.

ಹಲವಾರು ಲೀಲೆಗಳನ್ನು ಮಾಡಿದ ಶ್ರೀ ನಾಗಲಿಂಗ ಅಜ್ಜನವರು 1881ರಲ್ಲಿ ಜೀವಂತ ಸಮಾಧಿ ಹೊಂದಿದರು. ಧರ್ಮ, ಸಂಸ್ಕೃತಿ, ಕಲೆಗಳನ್ನೊಳಗೊಂಡ ಶ್ರೀ ನಾಗಲಿಂಗಜ್ಜನ ಕ್ಷೇತ್ರ ರಾಜ್ಯ ಹೊರರಾಜ್ಯದ ಗಮನ ಸೆಳೆದಿದೆ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಕಾಸ ತದ್ದೇವಾಡಿ ಹೇಳಿದರು.

ನವಲಗುಂದ ಶ್ರೀ ನಾಗಲಿಂಗ ಅಜ್ಜನವರ ಪುಣ್ಯಸ್ಥಳಕ್ಕೆ ರಾಜ್ಯ ಹೊರರಾಜ್ಯದಿಂದ ವರ್ಷವಿಡೀ ಭಕ್ತರು ಆಗಮಿಸಿ ದರ್ಶನ ಪಡೆದು ತಮ್ಮ ಹರಕೆ ತೀರಿಸುತ್ತ ಬಂದಿರುವುದು ವಿಶೇಷ. ಅಜ್ಜನನ್ನು ನೆನೆದು ಬಂದವರನ್ನು ಎಂದೂ ಕೈಬಿಡದೆ ಕಾಪಾಡಿರುತ್ತಾನೆ. ಶ್ರೀ ನಾಗಲಿಂಗಜ್ಜನ ಅಂಗಾರ ಊರತುಂಬಾ ಬಂಗಾರ ಎಂಬ ಭಕ್ತರ ಘೋಷಣೆಗಳು ಸದಾ ಕಂಡು ಬರುತ್ತವೆ ಎಂದು ಕನ್ನಡ ಪರ ಹೋರಾಟಗಾರ ಪ್ರಕಾಶ ಗೊಂದಲೇ ಹೇಳಿದರು.ನಾಗಲಿಂಗ ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿಯಾದ ಶ್ರೀ ವೀರಯ್ಯ ಸ್ವಾಮೀಜಿ ಶಕ್ತಿನೀಡಿ ಕೇವಲ ಧಾರ್ಮಿಕ ಕಾರ್ಯಕಲಾಪಗಳಿಗೆ ಮಾತ್ರ ಮಠವನ್ನು ಸೀಮಿತಗೊಳಿಸದೇ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಯಲ್ಲಿ ಸಕ್ರಿಯರಾಗಿ ಕಾರ್ಯಪ್ರವೃತ್ತರಾಗಿ ಧಾರ್ಮಿಕ ಕ್ಷೇತ್ರವನ್ನಾಗಿ ಪುಷ್ಟಿಗೊಳಿಸುತ್ತಿದ್ದು ನಮ್ಮೂರಿನ ಹೆಮ್ಮೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶಿವಕುಮಾರ ನಾಯ್ಕರ ಹೇಳಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ