ಕೋಡಿಮಠ ಶ್ರೀಗಳ ಚಿನ್ನಾಭರಣ ಕಳವುಕೇಸ್‌ : 7 ವರ್ಷ ಬಳಿಕ ಆರೋಪಿ ಅರೆಸ್ಟ್‌!

KannadaprabhaNewsNetwork |  
Published : Jun 29, 2025, 01:36 AM ISTUpdated : Jun 29, 2025, 08:34 AM IST
Kodimutt

ಸಾರಾಂಶ

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಬಳಿಯಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ, 7 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರು: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಬಳಿಯಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ, 7 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಉತ್ತರಾಖಂಡ್‌ನ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಚಾವ್ಲಾ (37) ಬಂಧಿತ ಆರೋಪಿ. 

ಮೈಸೂರು ರೈಲ್ವೆ ಠಾಣೆಯ ಪೊಲೀಸರು ಭಾನುವಾರ ಈತನನ್ನು ಬಂಧಿಸಿದ್ದು, ತನಿಖೆ ವೇಳೆ ಆತ ಕೋಡಿಶ್ರೀಯವರ ಆಭರಣ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. 2018ರಲ್ಲಿ ಶ್ರೀಗಳು ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ, 250 ಗ್ರಾಂ ತೂಕದ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂಗಳ ತಲಾ ಎರಡು ಚಿನ್ನದ ಉಂಗುರಗಳು, 1.62 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಲೆದರ್ ಬ್ಯಾಗ್‌ನಲ್ಲಿ ಚಿನ್ನದ ಆಭರಣ, ನಗದನ್ನು ಇಟ್ಟು ಸ್ವಾಮೀಜಿ ನಿದ್ದೆಗೆ ಜಾರಿದ್ದರು. ತಡರಾತ್ರಿ ಎಚ್ಚರಗೊಂಡು ನೋಡಿದಾಗ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನವಾಗಿತ್ತು. 

ಈತ ಸಹ ಪ್ರಯಾಣಿಕನಂತೆ ಟಿಕೆಟ್ ಪಡೆದು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ. ರಾತ್ರಿ ವೇಳೆ ಮಲಗುತ್ತಿದ್ದ ಪ್ರಯಾಣಿಕರನ್ನು ಗುರುತಿಸಿ ಹಣ ಮತ್ತು ಚಿನ್ನಾಭರಣ ಬ್ಯಾಗ್‌ ನೊಂದಿಗೆ ಪರಾರಿಯಾಗುತ್ತಿದ್ದ. ಹೀಗೆ ಕದ್ದ ಹಣದಿಂದ ಪಬ್, ಕ್ಯಾಸಿನೋಗಳಿಗೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದ. ಆಗಾಗ್ಗೆ, ಮನೆಯವರಿಗೂ ಹಣ ಕಳುಹಿಸುವ ಮೂಲಕ ತಾನು ಉದ್ಯಮ ನಡೆಸುತ್ತಿರುವುದಾಗಿ ಮನೆಯವರನ್ನು ನಂಬಿಸಿದ್ದ.

ಈತ ರೈಲಿನಲ್ಲಿ ನಡೆದ 17 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಸೇರಿ ಹಲವು ರಾಜ್ಯಗಳಲ್ಲಿ ನಡೆದ ರೈಲ್ವೆ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದಾನೆ. ಈತನಿಂದ 22.75 ಲಕ್ಷ ರೂ.ಮೌಲ್ಯದ 281 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ