ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಹುರೂಪಿ ನಾಟಕೋತ್ಸವ- 2025ರ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ರಂಗಾಯಣ ಒಂದು ಹೆಮ್ಮೆ. ನಾಗರೀಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಗರ ಪಾಲಿಕೆಯ ವತಿಯಿಂದ ಕಲಾಮಂದಿರ ಹಾಗೂ ರಂಗಾಯಣದ ಆವರಣದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡಲು ವ್ಯವಸ್ಥೆ ಮಾಡಿರುವ ಡಿಜಿಟಲ್ ಸ್ಕ್ರಿನ್ ಮೂಲಕ ಉತ್ಸವದ ಪ್ರಚಾರ ಮಾಡಬೇಕು ಎಂದರು.ನಾಟಕೋತ್ಸವ ನಡೆಯುವುದರಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಸೆಸ್ಕ್ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಉತ್ಸವದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕೆಎಸ್ಆರ್ ಟಿಸಿ ವತಿಯಿಂದ ಒದಗಿಸಬೇಕು. ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ನಾಟಕೋತ್ಸವದಲ್ಲಿ ಭಾಗವಹಿಸಲು ಮಾಹಿತಿ ನೀಡಬೇಕು ಎಂದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಬಹುರೂಪಿ ನಾಟಕೋತ್ಸವದಲ್ಲಿ 6 ದಿನಗಳ ಕಾಲ 24 ನಾಟಕಗಳು ಪ್ರದರ್ಶನ ಆಗುತ್ತಿವೆ. ಇದರಲ್ಲಿ ಬೇರೆ ಬೇರೆ ಭಾಷೆಯ ನಾಟಕಗಳು ಇವೆ. ಈ ಬಾರಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವವನ್ನು ಒಂದು ವೇದಿಕೆಯಲ್ಲಿ ಮಾಡಲಾಗುತ್ತಿದೆ. ಎಲ್ಲಾ ಇಲಾಖೆಗಳ ಸಹಕಾರ ನೀಡುವ ಮೂಲಕ ನಾಟಕೋತ್ಸವ ಯಶಸ್ವಿಗೆ ಕೈಜೋಡಿಸುವಂತೆ ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ, ಬಹುರೂಪಿ ನಾಟಕೋತವಕ್ಕೆ ಆಗಮಿಸುವ ಅತಿಥಿಗಳು, ಕಲಾತಂಡಗಳು ವಿದ್ವಾಂಸರನ್ನು ಕರೆ ತರಲು 4 ಮಿನಿ ಬಸ್ ಗಳು ಹಾಗೂ 3 ಟಾಟಾ ಸುಮೊ ವಾಹನಗಳನ್ನು ಒದಗಿಸಬೇಕು. ಗಣ್ಯರ ವಾಸ್ತವ್ಯಕ್ಕಾಗಿ ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕಾಯ್ದಿರಿಸಬೇಕು. ಬಹುರೂಪಿ ವಸ್ತು ಪ್ರದರ್ಶನದಲ್ಲಿ ಕರಕುಶಲ ಮಳಿಗೆಗಳನ್ನು ತೆರೆಯಲಾಗುವುದು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜವರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.