ಶಿವಕುಮಾರ ಕುಷ್ಟಗಿ
ಕೃಷಿ ಇಲಾಖೆಯ ಅಂಕಿ, ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 1.18 ಲಕ್ಷಕ್ಕೂ ಹೆಚ್ಚು ನೋಂದಾಯಿತ ರೈತ ಕುಟುಂಬಗಳಿವೆ. ಇವರಲ್ಲಿ ಸದ್ಯ 1.03 ಲಕ್ಷ ರೈತರಿಗೆ ಮಾತ್ರ ನಿರಂತರವಾಗಿ ಕಂತುಗಳು ತಲುಪುತ್ತಿವೆ. ಅಂದರೆ, ಜಿಲ್ಲೆಯ ಸುಮಾರು 15 ಸಾವಿರಕ್ಕೂ ಹೆಚ್ಚು ರೈತರು ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಧಾನಮಂತ್ರಿ ಕಿಸಾನ್ ಗೌರವ ನಿಧಿಯಿಂದ ವಂಚಿತರಾಗಿದ್ದು, ಇವರನ್ನೆಲ್ಲ ಸರ್ಕಾರ ಯೋಜನೆಯ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಕೃಷಿ ಇಲಾಖೆ ಮಾಡಬೇಕಿದೆ.
ಎಫ್‌ಐಡಿ ಆಗದವರು: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇದುವರೆಗೂ 4300ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿ(ಆರ್ ಟಿಸಿ) ಹಾಗೂ ಆಧಾರ್ ಕಾರ್ಡ್ ವಿವರಗಳು ತಾಳೆಯಾಗದ ಕಾರಣ ಅವರ ಫಾರ್ಮರ್ ಐಡಿ(ಎಫ್ಐಡಿ) ಮಾಡಲು ಆಗಿಲ್ಲ. ಕೃಷಿ ತಂತ್ರಾಂಶದಲ್ಲಿ ಎಫ್‌ಐಡಿ ಲಿಂಕ್ ಆಗದ ಹೊರತು ಪಿಎಂ ಕಿಸಾನ್ ಹಣ ಬಿಡುಗಡೆಯಾಗುವುದಿಲ್ಲ. ಹಾಗಾಗಿ ರೈತರಿಗೆ ಹಣಕಾಸಿನ ನೆರವು ಸಿಗುತ್ತಿಲ್ಲ.ಇ- ಕೆವೈಸಿ ಪ್ರಕ್ರಿಯೆ ಬಾಕಿ: ಎಫ್ಐಡಿ ಆಗದ ರೈತರೊಂದಿಗೆ ಇನ್ನುಳಿದ 6850ಕ್ಕೂ ಹೆಚ್ಚು ರೈತರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಇದಕ್ಕೆ ಅವರ ಕುಟುಂಬದ ಬೇರೆ ಬೇರೆ ಕಾರಣಗಳು ಇರುವ ಸಾಧ್ಯತೆ ಇದೆ. ಇನ್ನು ಕೆಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದು ಪೌತಿ ಪ್ರಕರಣಗಳು ಇತ್ಯರ್ಥವಾಗದೇ ಇರುವುದು ಪ್ರಮುಖ ಕಾರಣಗಳಾಗಿವೆ. ಆದರೆ ಕೇಂದ್ರ ಸರ್ಕಾರ ಇ- ಕೆವೈಸಿ ಇದನ್ನು ಕಡ್ಡಾಯಗೊಳಿಸಿರುವುದರಿಂದ ಈ ರೈತರಿಗೂ ಕಂತಿನ ಹಣ ಸಿಗುವ ಸಾಧ್ಯತೆ ಕಡಿಮೆ ಇದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕಟಾಫ್ ದಿನಾಂಕವನ್ನು ಕೇಂದ್ರ ಸರ್ಕಾರ 2019ರ ಫೆ. 1 ಎಂದು ನಿಗದಿ ಮಾಡಿದ್ದು, ಈ ದಿನಾಂಕದ ನಂತರ ಖರೀದಿಯಾಗುವ, ವಿಭಾಗವಾಗುವ, ಅಥವಾ ಆಸ್ತಿ ಬಿಟ್ಟು ಕೊಡುವ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಹಾಗೂ ಒಂದೇ ಕುಟುಂಬದಲ್ಲಿ ಗಂಡ, ಹೆಂಡತಿ ಪ್ರತ್ಯೇಕವಾಗಿ ಜಮೀನು ಹೊಂದಿದ್ದರೂ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಕೊಡಲಾಗುತ್ತದೆ. ಪ್ರಮುಖವಾಗಿ ಐಟಿ ರಿಟರ್ನ್ ಮಾಡುವವರು ತಮ್ಮ ಹೆಸರಿನಲ್ಲಿ ಜಮೀನು ಹೊಂದಿದ್ದರೂ ಅವರನ್ನು ರೈತರೆಂದು ಪರಿಗಣಿಸದೇ ಇರುವುದು ಸಾಮಾನ್ಯ ಕಾರಣಗಳಾಗಿವೆ.