ಹರಿಹರ ನಗರದ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗದಿಂದ ಶಿವಮೊಗ್ಗ ರಸ್ತೆಯ ಸೇತುವೆ ಕೆಳಭಾಗದಲ್ಲಿ ಹರಿದು ನದಿಗೆ ಸೇರುತ್ತಿದ್ದ ರಾಜ ಕಾಲುವೆಗೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ಕಾಂಕ್ರೀಟ್ ಚರಂಡಿ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
- ಹರಿಹರದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ । ನೀರು ಹರಿಯುವ ಮಾರ್ಗಗಳು ಒತ್ತುವರಿ: ಬಾಬುಲಾಲ್
- - -
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗದಿಂದ ಶಿವಮೊಗ್ಗ ರಸ್ತೆಯ ಸೇತುವೆ ಕೆಳಭಾಗದಲ್ಲಿ ಹರಿದು ನದಿಗೆ ಸೇರುತ್ತಿದ್ದ ರಾಜ ಕಾಲುವೆಗೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ಕಾಂಕ್ರೀಟ್ ಚರಂಡಿ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಅಂದಾಜು120 ಅಡಿಗಳಷ್ಟು ಅಗಲವಿರುವ ಬೃಹತ್ ರಾಜಕಾಲುವೆ ಇದಾಗಿದೆ. ಆದರೆ, ಕೇವಲ 15 ರಿಂದ 18 ಅಡಿ ಅಗಲದವರೆಗೆ ಮಾತ್ರ ಚರಂಡಿ ನಿರ್ಮಿಸುತ್ತಿದ್ದಾರೆ. ಈ ಮೂಲಕ ಕಾಲುವೆಯ ಉಳಿದ ಜಮೀನು ಒತ್ತುವರಿದಾರರ ಪಾಲಾಗಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪೂರ್ವ ಭಾಗದಿಂದ ನೂರಾರು ಎಕರೆ ಜಮೀನುಗಳ ಮಳೆನೀರು, ದೇವರಬೆಳೆಕೆರೆ ಕಾಲುವೆಯ ಹೆಚ್ಚುವರಿ ನೀರು ಈ ರಾಜ ಕಾಲುವೆ ಮೂಲಕ ನದಿಗೆ ಸೇರುತ್ತಿತ್ತು. ಈಗ ಅದರ ಅಗಲವನ್ನು 100 ಅಡಿಗೂ ಕಡಿಮೆ ಮಾಡಿ ಚರಂಡಿ ನಿರ್ಮಿಸುತ್ತಿರುವುದು ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡೆ ಬಗ್ಗೆ ಅನುಮಾನ ಮೂಡಿಸುತ್ತಿದೆ.
ನಗರಸಭೆ ಮಾಜಿ ಸದಸ್ಯ ಎಂ.ಎಸ್.ಬಾಬುಲಾಲ್ ಈ ಕುರಿತು ಮಾತನಾಡಿ, ಸಹಜವಾಗಿ ನೀರು ಹರಿದುಬರುವ ಮಾರ್ಗಗಳು ಹಲವೆಡೆ ಒತ್ತುವರಿಯಾಗಿವೆ. ಇದರಿಂದಾಗಿ ಈ ಹಳ್ಳಕ್ಕೆ ಹರಿದು ಬರುವ ನೀರಿನ ಪ್ರಮಾಣ ಈಚೆಗೆ ಕಡಿಮೆಯಾಗಿದೆ. ಹಿಂದೆ ಮಳೆಗಾಲದಲ್ಲಿ ಈ ಹಳ್ಳದಲ್ಲಿ ಹರಿಯುತ್ತಿದ್ದ ಅಪಾರ ಪ್ರಮಾಣದ ನೀರಿನಲ್ಲಿ ಇಲ್ಲಿಯ ಜನರು ಸ್ನಾನ ಮಾಡುವುದು, ಈಜುವುದು, ಬಟ್ಟೆ ತೊಳೆಯುವುದು ಮಾಡುತ್ತಿದ್ದರು ಎಂದರು.
₹4.82 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿ ಈ ಭಾಗದ ಬದಲು ಜೆ.ಸಿ. ಬಡಾವಣೆ 2ನೇ ಮೇನ್ 4, 5, 6ನೇ ಕ್ರಾಸ್ ಬಳಿಯ ಕಾಲುವೆಯಲ್ಲಿ ಕೈಗೊಂಡಿದ್ದರೆ, ಆ ಭಾಗದಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿತ್ತು. ಹಳೇ ಪಿ.ಬಿ. ರಸ್ತೆ ಪಕ್ಕದಿಂದ ಹರಿದು ಬರುವ ಈ ಹಳ್ಳವನ್ನು ಮುಚ್ಚಿ ಈಗಾಗಲೇ ಹಲವು ಎಕರೆ ಜಮೀನು ಭೂಗಳ್ಳರ ಪಾಲಾಗಿದೆ. ಕಾಲುವೆ ಗಾತ್ರ ಕಿರಿದಾಗಿಸಿ ಇನ್ನಷ್ಟು ಎಕರೆ ಜಮೀನು ಭೂಗಳ್ಳರ ಪಾಲಾಗುವಂತೆ ಮಾಡುವುದು ಈ ಕಾಮಗಾರಿ ಉದ್ದೇಶವಾಗಿದೆ ಎಂದು ಕಿಡಿಕಾರಿದರು.
ಸಾರ್ವಜನಿಕರ ಆರೋಪ:
ಜೆ.ಸಿ. ಬಡಾವಣೆ 1ನೇ ಮೇನ್ ನ 5ನೇ ಕಾಸ್ ನಲ್ಲಿರುವ ಕೆಳ ಹಂತದ ಸೇತುವೆಯನ್ನು ಎತ್ತರಿಸಿ, ಅಲ್ಲಿ ಉತ್ತಮವಾದ ರಸ್ತೆ ನಿರ್ಮಿಸಬೇಕು. ಇದಕ್ಕಾಗಿ ₹50 ಲಕ್ಷ ಅನುದಾನ ದೊರಕಿಸಿದರೆ ಸಾವಿರಾರು ಜನರ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಈ ಭಾಗದ ಜನಸಾಮಾನ್ಯರು ದುಂಬಾಲು ಬಿದ್ದಿದ್ದಾರೆ. ಆದರೆ, ಮನವಿಗಳಿಗೆ ಸ್ಪಂದಿಸದ ರಾಜಕಾರಣಿಗಳು ಒತ್ತುವರಿದಾರರಿಗೆ ಅನುಕೂಲ ಮಾಡಿ ಕೊಡಲು ₹4.82 ಕೋಟಿ ಅನುದಾನ ಸದ್ದಿಲ್ಲದೇ ಹೇಗೆ ಬಿಡುಗಡೆ ಮಾಡಿಸಿದರು ಎಂಬುದು ಕೆಲ ಜನಪರ ಹೋರಾಟಗಾರರ ಪ್ರಶ್ನೆಯಾಗಿದೆ.
ಆದರೆ, ಸಣ್ಣ ನೀರಾವರಿ ಇಲಾಖೆಯ ಎಇಇ ಹರೀಶ್ ಹೇಳೋದು ಹೀಗೆ; ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗ ಅಂದಾಜು 250 ಮೀಟರ್ ಉದ್ದಕ್ಕೆ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಚರಂಡಿಯ ಅಗಲ 4 ರಿಂದ 5 ಮೀ.ವರೆಗೆ ಇರಲಿದೆ. ಕಂದಾಯ ಇಲಾಖೆಯಿಂದ ಸರ್ವೆ ಮಾಡಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
- - -
-08HRR.01:
ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗ ಸಣ್ಣ ನೀರಾವರಿ ಇಲಾಖೆಯಿಂದ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.