ಜಿಲ್ಲೆ ಗಡಿಯಲ್ಲಿ 15 ಎಕರೆ ಅರಣ್ಯ ಒತ್ತುವರಿ ತೆರವು

KannadaprabhaNewsNetwork | Published : Jan 13, 2025 12:45 AM

ಸಾರಾಂಶ

ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಸುಮಾರು 15 ಎಕರೆ ಪ್ರದೇಶದಲ್ಲಿ ಅಡಕೆ, ಬಾಳೆತೋಟ ಮಾಡಿಕೊಂಡಿದ್ದ ಸ್ಥಳದ ಮೇಲೆ ಭದ್ರಾವತಿ ಅರಣ್ಯ ವಲಯದ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಏಕಾಏಕಿ ದಾಳಿ ಮಾಡಿ, ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.

- ಭದ್ರಾವತಿ ಅರಣ್ಯಾಧಿಕಾರಿಗಳಿಂದ ಅಡಕೆ, ತೆಂಗಿನ ತೋಟ ತೆರವು ಕಾರ್ಯಾಚರಣೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಸುಮಾರು 15 ಎಕರೆ ಪ್ರದೇಶದಲ್ಲಿ ಅಡಕೆ, ಬಾಳೆತೋಟ ಮಾಡಿಕೊಂಡಿದ್ದ ಸ್ಥಳದ ಮೇಲೆ ಭದ್ರಾವತಿ ಅರಣ್ಯ ವಲಯದ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಏಕಾಏಕಿ ದಾಳಿ ಮಾಡಿ, ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ದಾವಣಗೆರೆ ಜಿಲ್ಲೆಯ ಗಡಿ ಭಾಗದ ಸಮೀಪ ರಿ.ಸ.ನಂ.43ರಲ್ಲಿ ಸುಮಾರು 15 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ, ಅಡಕೆ ಮತ್ತು ಬಾಳೆ ತೋಟ ನಿರ್ಮಿಸಿದ್ದರು. ಆದರೆ, ಬೆಳ್ಳಂಬೆಳಿಗ್ಗೆಯೇ ಅರಣ್ಯ ಇಲಾಖೆಯ ಕಾರ್ಯಾಚರಣೆ ಮಾಡಿ, ಒತ್ತುವರಿ ತೆರವು ಕಾರ್ಯ ಕೈಗೊಂಡಿತು.

ಯಾವುದೇ ಮುಲಾಜಿಗೆ ಒಳಗಾಗದೇ, ಯಾರದ್ದೇ ಒತ್ತಡಕ್ಕೂ ಒಳಗಾಗದೇ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ 15 ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಿದರು. ಸುಮಾರು 3 ಸಾವಿರಕ್ಕೂ ಅಧಿಕ ಅಡಕೆ ಮರ ಹಾಗೂ ಬಾಳೆ ಗಿಡಗಳನ್ನು ಕತ್ತರಿಸಿ, ಭೂಮಿ ವಶಕ್ಕೆ ತೆಗೆದುಕೊಳ್ಳಲಾಯಿತು. ಸುಮಾರು ವರ್ಷಗಳಿಂದಲೂ ಈ ಭಾಗದಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡು, ತೋಟ ಮಾಡಿಕೊಂಡಿದ್ದ ರೈತರಿಗೆ ಅರಣ್ಯ ಇಲಾಖೆ ಕಾರ್ಯಾಚರಣೆಯೊಂದಿಗೆ ಶಾಕ್ ನೀಡಿದೆ.

ಒತ್ತುವರಿ ರೈತರಿಗೆ ಈಗಾಗಲೇ 2 ಸಲ ನೋಟಿಸ್ ಜಾರಿಗೊಳಿಸಲಾಗಿತ್ತು. ಇಲಾಖೆ ನೋಟಿಸ್‌ಗೆ ರೈತರು ಕಿವಿಗೊಡದ ಹಿನ್ನೆಲೆ ಅರಣ್ಯ ಅಧಿಕಾರಿಗಳೇ ಫೀಲ್ಡ್‌ಗಿಳಿದು, ತೆರವು ಕಾರ್ಯ ಕೈಗೊಂಡರು. ಅರಣ್ಯ ಇಲಾಖೆ ಕಾರ್ಯಾಚರಣೆಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು.

- - - -12ಕೆಡಿವಿಜಿ3, 4, 5, 6, 7, 8, 9:

Share this article