ಶಾರ್ಟ್ ಸರ್ಕ್ಯೂಟ್‌ಗೆ 15 ಎಕರೆ ಕಬ್ಬು ಭಸ್ಮ

KannadaprabhaNewsNetwork |  
Published : Nov 19, 2026, 03:00 AM IST
18ದವವ,ಬ ,ದವ, | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಗಳಖೋಡಪಟ್ಟಣದ ದಾಸರತೋಟದ ಬಳಿ ಇರುವ ಹುಬ್ಬಳ್ಳಿ ಹಾಗೂ ಯರಡೆತ್ತಿ ಅವರ ತೋಟಗಳಲ್ಲಿ ಬುಧವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮುಗಳಖೋಡ

ಪಟ್ಟಣದ ದಾಸರತೋಟದ ಬಳಿ ಇರುವ ಹುಬ್ಬಳ್ಳಿ ಹಾಗೂ ಯರಡೆತ್ತಿ ಅವರ ತೋಟಗಳಲ್ಲಿ ಬುಧವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಸದಾಶಿವ ಯರಡೆತ್ತಿ ಅವರಿಗೆ ಸೇರಿದ 6 ಎಕರೆ, ಬಸಪ್ಪ ಹುಬ್ಬಳ್ಳಿ ಅವರ 5 ಎಕರೆ ಹಾಗೂ ಅಶೋಕ ಬಾಬಣ್ಣವರ ಅವರ 4 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಕಬ್ಬಿನ ಬೆಳೆಗಳ ಜತೆಗೆ ಜಮೀನುಗಳಲ್ಲಿ ಅಳವಡಿಸಿದ್ದ ಹನಿ ನೀರಾವರಿ (ಡ್ರಿಪ್) ಪೈಪ್‌ಗಳು, ಇತರೆ ನೀರಾವರಿ ಸಾಮಗ್ರಿಗಳು ಹಾಗೂ ಬೋರ್‌ವೆಲ್‌ಗಳ ವಿದ್ಯುತ್ ಕೇಬಲ್‌ಗಳು ಸುಟ್ಟು ಕರಕಲಾಗಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ, ಬೆಂಕಿಯ ತೀವ್ರತೆಗೆ ಕಬ್ಬಿನ ಬೆಳೆ ವೇಗವಾಗಿ ಹೊತ್ತಿ ಉರಿದ ಪರಿಣಾಮ ಹೆಚ್ಚಿನ ಪ್ರಮಾಣದ ಬೆಳೆ ನಾಶವಾಗಿದೆ.

ಪರಿಹಾರಕ್ಕಾಗಿ ರೈತರ ಆಗ್ರಹ: ವರ್ಷವಿಡೀ ಕಷ್ಟಪಟ್ಟು ಬೆಳೆ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಅಗ್ನಿ ಅವಘಡ ಬರಸಿಡಿಲು ಬಡಿದಂತಾಗಿದೆ. ಬೆಳೆಗಾಗಿ ಮಾಡಿದ್ದ ಸಾಲ, ಕೃಷಿ ವೆಚ್ಚ ಹಾಗೂ ನೀರಾವರಿ ವ್ಯವಸ್ಥೆಗೆ ಹೂಡಿಕೆ ಮಾಡಿದ್ದ ಹಣ ಬೆಂಕಿಯಲ್ಲಿ ಭಸ್ಮವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು. ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಗರಿಷ್ಠ ಪರಿಹಾರ ಒದಗಿಸುವುದರ ಜತೆಗೆ ಹಾನಿಗೊಳಗಾದ ಹನಿನೀರಾವರಿ ವ್ಯವಸ್ಥೆ ಹಾಗೂ ಬೋರ್‌ವೆಲ್‌ಗಳ ವಿದ್ಯುತ್ ಕೇಬಲ್‌ಗಳಿಗೂ ಪರಿಹಾರ ನೀಡಬೇಕು ಎಂದು ರೈತರಾದ ಸದಾಶಿವ ಯರಡೆತ್ತಿ ಮತ್ತು ಬಸಪ್ಪ ಹುಬ್ಬಳ್ಳಿ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸಿದ್ದಪ್ಪ ಹತ್ತರಕಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಬೆಳೆ ಮತ್ತು ಇತರೆ ಸಾಮಗ್ರಿಗಳ ಹಾನಿಯ ಕುರಿತು ಪಂಚನಾಮೆ ನಡೆಸಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳೂ ಸ್ಥಳ ಪರಿಶೀಲನೆ ನಡೆಸಿ, ಶಾರ್ಟ್ ಸರ್ಕ್ಯೂಟ್‌ಗೆ ಕಾರಣ ಹಾಗೂ ವಿದ್ಯುತ್ ಅವಘಡದ ಕುರಿತು ಮಾಹಿತಿ ಸಂಗ್ರಹಿಸಿದರು.

ಈ ವೇಳೆ ರಾಯಬಾಗ ಅಗ್ನಿಶಾಮಕ ಠಾಣಾಧಿಕಾರಿ ಆರ್.ಆರ್. ಚಾಲಣ್ಣವರ, ಸಿಬ್ಬಂದಿ ಶಂಕರ ಮೂಡಶಿ, ಶಾಹೂ ಕದಂ, ಮಂಜುನಾಥ ಉಮರಾಣಿ, ಕೆಂಪಣ್ಣ ಬೂತಪ್ಪಗೋಳ, ಶ್ರೀನಾಥ ಇಂಚಲ್, ಸುನೀಲ ನಾವಿ ಹಾಗೂ ರೈತರಾದ ಹುಲೆಪ್ಪ ಹುಬ್ಬಳ್ಳಿ, ಕಿರಣ ಯರಡೆತ್ತಿ, ಅಶೋಕ ಬಾಬಣ್ಣವರ, ಪ್ರಕಾಶ ಮುಗಳಿ ಸೇರಿದಂತೆ ಸುತ್ತಮುತ್ತಲಿನ ರೈತರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ