ನವನಗರ ಯೂನಿಟ್-3ರ ಸೆಕ್ಟರ್ ಅ ಮತ್ತು ಆ ಪ್ರದೇಶದಲ್ಲಿರುವ 229 ಎಕರೆ ಜಾಗವನ್ನು ಕೇಂದ್ರೀಕೃತ ಮಾರುಕಟ್ಟೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸರ್ಕಾರದ ತ್ವರಿತ ಅನುಮೋದನೆ ನೀಡುವಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರ ಯೂನಿಟ್-3ರ ಸೆಕ್ಟರ್ ಅ ಮತ್ತು ಆ ಪ್ರದೇಶದಲ್ಲಿರುವ 229 ಎಕರೆ ಜಾಗವನ್ನು ಕೇಂದ್ರೀಕೃತ ಮಾರುಕಟ್ಟೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸರ್ಕಾರದ ತ್ವರಿತ ಅನುಮೋದನೆ ನೀಡುವಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದ್ದಾರೆ.ಈ ಕುರಿತು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದ ಅವರು, ಯೋಜನೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಅನುಮೋದನೆ ನೀಡಿ, ಅಗತ್ಯ ನಗರ ಯೋಜನಾ ಹಾಗೂ ಕಾನೂನುಬದ್ಧ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾರ್ಯಗತಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ನವನಗರ ಯೋಜಿತ ನಗರವಾಗಿ ಅಭಿವೃದ್ಧಿಯಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ವ್ಯಾಪಾರ, ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆ ಯೂನಿಟ್-3ರ ಸೆಕ್ಟರ್ ಅ ಮತ್ತು ಆ ಪ್ರದೇಶದಲ್ಲಿರುವ ಸುಮಾರು 229 ಎಕರೆ ಜಾಗವನ್ನು ಕೇಂದ್ರೀಕೃತ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಪ್ರಸ್ತಾವನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.ವ್ಯಾಪಾರಿಗಳಿಂದಲೂ ಮನವಿ:
ನವನಗರದಲ್ಲಿ ಕೇಂದ್ರೀಕೃತ ಮಾರುಕಟ್ಟೆ ನಿರ್ಮಾಣಕ್ಕೆ ಫೆಡರೇಶನ್ ಆಫ್ ಮಚೆರ್ಂಟ್ಸ್ ಅಸೋಸಿಯೇಷನ್, ಬಾಗಲಕೋಟೆ ವತಿಯಿಂದಲೂ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ವ್ಯಾಪಾರಿಗಳು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಅಗತ್ಯ ವಾಣಿಜ್ಯ ಸೌಲಭ್ಯದೊರೆಯುವಂತೆ ಮಾರುಕಟ್ಟೆ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಯೂನಿಟ್-3ರಲ್ಲಿ ವಸತಿ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿರುವ ಜಾಗವನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸುವ ಕುರಿತು ಬಿಟಿಡಿಎ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಸಂಬಂಧ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಟ್ಟದಲ್ಲಿ ಅಗತ್ಯ ಕ್ರಮಗಳು ಮುಂದುವರಿದಿವೆ.ಮೂಲಸೌಕರ್ಯಕ್ಕೆ ವಿಶೇಷ ಅನುದಾನಕ್ಕೆ ಮನವಿ:
ಕೇಂದ್ರೀಕೃತ ಮಾರುಕಟ್ಟೆ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಒಳಚರಂಡಿ, ನೀರು ಸರಬರಾಜು, ವಿದ್ಯುತ್, ಪಾರ್ಕಿಂಗ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿಶೇಷ ಅನುದಾನ ಒದಗಿಸುವಂತೆಯೂ ಮನವಿಯಲ್ಲಿ ಕೋರಲಾಗಿದೆ.ಪ್ರಮುಖ ಬೇಡಿಕೆಗಳು:
229 ಎಕರೆ ಪ್ರದೇಶವನ್ನು ಕೇಂದ್ರೀಕೃತ ಮಾರುಕಟ್ಟೆ ಅಭಿವೃದ್ಧಿಗಾಗಿ ಮೀಸಲಿಡಲು ತ್ವರಿತ ಅನುಮೋದನೆ. ವಸತಿ ಉದ್ದೇಶದ ಪ್ರದೇಶವನ್ನು ವಾಣಿಜ್ಯ ಕೇಂದ್ರೀಕೃತ ಮಾರುಕಟ್ಟೆ ಉದ್ದೇಶಕ್ಕೆ ಪರಿವರ್ತಿಸಲು ಅಗತ್ಯ ಅನುಮೋದನೆಗಳನ್ನು ತ್ವರಿತವಾಗಿ ನೀಡುವುದು. ಆಧುನಿಕ ನಿರ್ಮಾಣಕ್ಕೆ ಸಮಗ್ರ ಯೋಜನೆ ರೂಪಿಸುವುದು. ರಸ್ತೆ, ಒಳಚರಂಡಿ, ನೀರು, ವಿದ್ಯುತ್, ಪಾರ್ಕಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕೆ ವಿಶೇಷ ಅನುದಾನ ಒದಗಿಸುವುದು.ಈ ಯೋಜನೆ ಕೇವಲ ಮಾರುಕಟ್ಟೆ ನಿರ್ಮಾಣಕ್ಕೆ ಸೀಮಿತವಾಗದೆ, ಬಾಗಲಕೋಟೆ ನಗರದ ಭವಿಷ್ಯದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ವ್ಯಾಪಾರ ವಿಸ್ತರಣೆಗೆ ಪ್ರಮುಖ ಆಧಾರವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಅವರು ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಿ ಅಗತ್ಯ ನಿರ್ದೇಶನ ನೀಡಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದ್ದಾರೆ.---------