ಕನ್ನಡ ಭಾಷೆಗೆ 2500 ವರ್ಷಗಳ ಗಟ್ಟಿಯಾದ ಇತಿಹಾಸವಿದ್ದು, ಕನ್ನಡ ನಾಡು ನುಡಿಯ ರಕ್ಷಣೆಯೊಂದಿಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ಭಾಷೆಗೆ 2500 ವರ್ಷಗಳ ಗಟ್ಟಿಯಾದ ಇತಿಹಾಸವಿದ್ದು, ಕನ್ನಡ ನಾಡು ನುಡಿಯ ರಕ್ಷಣೆಯೊಂದಿಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯಪಟ್ಟರು.ನಗರದ ಹೊರವಲಯದ ಹಿಟ್ಟಿನಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಹಾಗೂ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭದ ನಿಮಿತ್ತ ಹಮ್ಮಿಕೊಂಡ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರಿ.ಪೂ 2ನೇ ಶತಮಾನದಿಂದಲೇ ಅಸ್ತಿತ್ವದಲ್ಲಿದ್ದ ನಮ್ಮೆಲ್ಲರ ಅಭಿಮಾನದ ಭಾಷೆ ಕನ್ನಡ. ಮೂವರು ರಾಷ್ಟ್ರಕವಿಗಳನ್ನು ಹಾಗೂ 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕವನ ಸಂಕಲನ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಸಾಹಿತ್ಯ, ಅಭಿನಂದನಾ ಗ್ರಂಥ ಸಾಹಿತ್ಯ ಹೀಗೆ ನಾನಾ ಪ್ರಕಾರಗಳಲ್ಲಿ ಕಾವ್ಯ ರಚಿಸಿರುವ ಕನ್ನಡ ಕವಿಗಳು, ಕವಯತ್ರಿಯರು ಈ ನಾಡಿನ ಸಾಹಿತ್ಯ ಕ್ಷೇತ್ರದ ದಿಗ್ಗಜರು ಎಂದು ಬಣ್ಣಿಸಿದರು.ವಚನಕಾರರಿಂದ ವಚನ ಸಾಹಿತ್ಯ, ದಾಸ ಸಾಹಿತ್ಯದಿಂದ ಕೀರ್ತನ ಸಾಹಿತ್ಯ ಹೀಗೆ ಆಯಾ ಕಾಲಘಟ್ಟದಲ್ಲಿ ವಿಶಿಷ್ಟ ಸಾಹಿತ್ಯ ರಚಿಸುವ ಮೂಲಕ ಕನ್ನಡ ಭಾಷೆಯು ತನ್ನದೇಯಾದ ಮಹತ್ವವನ್ನು ಪಡೆದುಕೊಂಡಿದೆ ಈ ನಾಡು ಕಟ್ಟುವಲ್ಲಿ ಹಲವಾರು ಜನ ಕನ್ನಡದ ಕಟ್ಟಾಳುಗಳು ಭಾಷಾವಾರು ಪ್ರಾಂತ್ಯ ರಚನೆಯೊಂದಿಗೆ ಕನ್ನಡ ಭಾಷೆಗೆ ಸ್ವತಂತ್ರ ಅಸ್ತಿತ್ವವನ್ನು ನೀಡುವ ಮೂಲಕ ಭಾಷಾ ಪ್ರೇಮವನ್ನು ಮೆರೆದಿದ್ದಾರೆ. ಕನ್ನಡಿಗರಾದ ನಾವುಗಳು ಒಂದಾಗಿ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸುವ ಕಾರ್ಯವನ್ನು ನಾಡು,ನುಡಿ, ನೆಲ, ಜಲ ಭಾಷೆಯನ್ನು ಸಂರಕ್ಷಿಸುವ ಜವಾಬ್ದಾರಿಯುತ ಕಾರ್ಯ ನಾವೆಲ್ಲ ಮಾಡಬೇಕಾಗಿದೆ ಎಂದರು. ತೊರವಿಯ ಸಿದ್ಧಲಿಂಗೇಶ್ವರ ಮಹಾಮಠದ ಪ.ಪೂ ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿ, ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯಲ್ಲಿ ಸಾಹಿತ್ಯ ಅತ್ಯಂತ ಹುಲುಸಾಗಿ ಬೆಳೆದಿದ್ದು ಹಲವು ಪ್ರಕಾರದ ಸಾಹಿತ್ಯ ರಚನೆಯಾದ ಈ ಭಾಷೆಗೆ ತನ್ನದೇ ಆದ ಮಹತ್ವವಿದೆ ಎಂದರು.ವಿಜಯಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಹಿಟ್ಟಿನಹಳ್ಳಿ ಗ್ರಾಮದಲ್ಲಿ ಅತ್ಯಂತ ಅಭಿಮಾನದಿಂದ 71ನೇ ರಾಜ್ಯೋತ್ಸವದ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ನ ಭೂತೋ ನ ಭವಿಷ್ಯತ್ತಿ ಅನ್ನುವ ಹಾಗೆ ಎಂಟನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ಭಾಷಾ ಪ್ರೇಮವನ್ನು ಮೆರೆದು ಕನ್ನಡ ಅಕ್ಷರ ಜಾತ್ರೆಯನ್ನು ಸಂಪನ್ನಗೊಳಿಸಿದ ತಮಗೆ ತುಂಬು ಹೃದಯದ ಅಭಿನಂದನೆಗಳು. ಕನ್ನಡ ಸಾಹಿತ್ಯದ ಮೂಲಕ ನಾವೆಲ್ಲರೂ ನಮ್ಮ ನಾಡಿನ ಸಂಸ್ಕೃತಿಯನ್ನು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡೋಣ ಎಂದರು.ಇದೇ ಸಂದಭ೯ದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪಡೆದ ಎಂ.ಸಿ.ಮುಲ್ಲಾ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಕೆರ್ ವಾಲಿಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಪದಾಧಿಕಾರಿಗಳಾದ ಜಯಶ್ರೀ ಹಿರೇಮಠ. ವಿಜಯಕುಮಾರ ಘಾಟಗೆ, ಅಜು೯ನ ಶಿರೂರ, ಡಾ.ಕೆ.ಬಿ.ಹಿರೇಮಠ ಮಾತನಾಡಿದರು.ರಾಜುಗೌಡ ಕಳಸಗೊಂಡ, ಶಕುಂತಲಾ ಹಿರೇಮಠ, ವೀರೇಶ್ ವಾಲಿ, ನಾನಾಗೌಡ ಕಳಸಗೌಡ, ಆರ್.ಬಿ.ಬಿರಾದಾರ, ಆಶಾ ಬಿರಾದಾರ, ಚಂದ್ರಶೇಖರ ಮಲಘಾನ, ಮಲ್ಲಪ್ಪ ಭಾವಿಕಟ್ಟಿ, ಸಂಗನಗೌಡ ಬಿರಾದಾರ ವೇದಿಕೆಯ ಮೇಲಿದ್ದರು. ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ್ ಸ್ವಾಗತಿಸಿ, ಗೌರವಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಜಯಶ್ರೀ ಹಿರೇಮಠ ವಂದಿಸಿದರು. ಶಕುಂತಲಾ ಹಿರೇಮಠ ಸೇರಿದಂತೆ ಅನೇಕ ಕಲಾ ತಂಡಗಳ ಕಲಾವಿದರು ಕನ್ನಡ ನಾಡು ನುಡಿಯ ಕುರಿತು ಅಭಿಮಾನದ ಗೀತೆಗಳನ್ನು ಪ್ರಸ್ತುತಪಡಿಸಿದರು.71ನೇ ರಾಜ್ಯೋತ್ಸವದ ನಿಮಿತ್ತ ದಿವ್ಯಾ ಹಾಗೂ ದೀಕ್ಷಾ ಭಿಸೆ ಹಾಗೂ ಅನುರಾಧಾ ಸುತಾರ. ಕರುಣಾ ಮುಂಬಯಿ ಸಂಗಡಿಗರು, ಸ್ವಯಂಭೋ ಕಲಾ ತಂಡದ ಕಲಾವಿದರು ಕನ್ನಂಡಾಬೆಯ ಅಭಿಮಾನದ ಹೆಮ್ಮೆಯ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ನೆರೆದಿದ್ದ ಕನ್ನಡಾಭಿಮಾನಿಗಳಿಗೆ ರಸದೌತಣ ಉಣಬಡಿಸಿದರು. ಒಟ್ಟಾರೆ ಇಡೀ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಕನ್ನಡದ ಕಲರವ ಮೊಳಗಿತ್ತು. 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಾಯ ಸಹಕಾರ ನೀಡಿದವರೆಲ್ಲರಿಗೂ ಗೌರವಿಸಲಾಯಿತು. ಸಂಗಮೇಶ ಚೂರಿ, ರವಿ ಕಿತ್ತೂರ, ಸುರೇಶ ಜತ್ತಿ, ದ್ಯಾಮಗೊಂದ ನಾಗೋಡ, ಶಂಕರಗೌಡ ಬಿರಾದಾರ, ಮಹಾಂತೇಶ ಹೊಸುರ, ರಾಜೇಂದ್ರ ಕೋರಡ್ಡಿ, ಜಗನ್ನಾಥ ಚೌಧರಿ, ಶ್ರೀಕಾಂತ ಚೌಧರಿ
ದುಂಡಪ್ಪ ಬಗಲಿ, ಹುಸೇನ ವಾಲೀಕಾರ, ಮಹಾಂತಮ್ಮ ಇಂಡಿ, ಸುಭಾಶ ಯಂಭತ್ತನಾಳ, ಮಂಜುನಾಢ ಬಿರಾದಾರ, ಮುದಸ್ಸರ ವಾಲೀಕಾರ, ಬಸನಗೌಡ ಬಿರಾದಾರ, ಸುಶೀಲಾ ತಳೆವಾಡ, ಮಹೇತಾಬ ಕಾಗವಾಡ, ಸುರೇಶ ಇಂಡಿ, ಕಮಲಾಕರ ತಳೆವಾಡ, ಮಹಮ್ಮದ್ ವಾಲೀಕಾರ, ಲಾಲಸಾಬ ವರಾತದಾರ, ವಿರುಪಾಕ್ಷ ಕಕಮರಿ, ಅಪ್ಪು ನಾಟೀಕಾರ, ವಿಠ್ಠಲ ಗರಸಂಗಿ, ಮಲ್ಲಿಕಾಜು೯ನ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.