ಧಾರವಾಡ: ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕಳೆದ ಮೇ 29 ರಿಂದ ಜೂ. 12ರ ವರೆಗೆ ಜಿಲ್ಲೆಯ ವಿವಿಧೆಡೆ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಈ ಮುಂಗಾರು- ಪೂರ್ವ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಕವಾಗಿ ಕುರುಬಗಟ್ಟಿ ಗ್ರಾಮದಲ್ಲಿ ಉದ್ಘಾಟಿಸಲಾಯಿತು.
ಅಭಿಯಾನದಲ್ಲಿ ವಿವಿಧ ವಿಷಯಗಳ ಮೇಲೆ ಕೃಷಿ ತಾಂತ್ರಿಕತೆಗಳನ್ನು ಸ್ಥಳದಲ್ಲಿಯೇ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಬೆಳೆ ಉತ್ಪಾದನೆ ಹಾಗೂ ಮಣ್ಣಿನ ಆರೋಗ್ಯ, ಭೂಮಿ ಸಿದ್ಧತೆ, ಹಸಿರೆಲೆಗೊಬ್ಬರದ ಉಪಯೋಗ, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ದ್ವಿದಳ ಧಾನ್ಯಗಳಲ್ಲಿ ಕೃವಿವಿ, ಧಾರವಾಡದ ಪಲ್ಸ್ ಬೂಸ್ಟರ್‌ನ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕೀಟ ಹಾಗೂ ರೋಗ ನಿರ್ವಹಣೆ, ನಿಖರ ಕೃಷಿ, ನೈಸರ್ಗಿಕ ಕೃಷಿ ಹಾಗೂ ಪೌಷ್ಟಿಕಾಂಶ ಕುರಿತು ವಿಸ್ತೃತ ಮಾರ್ಗದರ್ಶನ ನೀಡಲಾಯಿತು.ನಿಖರ ಕೃಷಿಗಾಗಿ ಡ್ರೋನ್ ಪ್ರದರ್ಶನ, ಹತ್ತಿಯಲ್ಲಿ ಹೆಚ್ಚಿನ ಸಾಂದ್ರತೆಯ ನಾಟಿ ಹಾಗೂ ಡ್ರಮ್ ಸೀಡರ್‌ಗಳ ಬಳಕೆ, ನ್ಯಾನೊ ಯೂರಿಯಾ ಹಾಗೂ ಸಂಕೀರ್ಣ ರಸಗೊಬ್ಬರಗಳ ಉಪಯೋಗದ ಬಗ್ಗೆ ಮಾಹಿತಿ ನೀಡಲಾಯಿತು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ, ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ, ಡಾ. ಎಸ್.ಎ. ಗದ್ದನಕೇರಿ, ಡಾ. ಸಿ.ಆರ್. ಪಾಟೀಲ ಸೇರಿದಂತೆ ಕೃಷಿ ವಿಜ್ಞಾನಿಗಲಾದ ಡಾ. ಸಂತೋಷ ಒಂಟೆ, ಡಾ. ಐರಾದೇವಿ ಅಂಗಡಿ, ಡಾ. ಪ್ರವೀಣ ಗೋರೊಜಿ, ಕಲಾವತಿ ಕಂಬಳಿ, ಡಾ. ಪಲ್ಲವಿ, ವಿದ್ಯಾ ಸಂಗಣ್ಣವರ ಸೇರಿದಂತೆ ಹಲವರು ಅಭಿಯಾನದಲ್ಲಿದ್ದರು.