ತ್ಯಾಜ್ಯ ನೀರು ಕಾಲುವೆ ಮುಚ್ಚಲು 15 ದಿನ ಗಡುವು

KannadaprabhaNewsNetwork |  
Published : Jul 5, 2025 12:18 AM IST
ದೊಡ್ಡಬಳ್ಳಾಪುರದಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳ ಕೆರೆಗಳಿಗೆ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ ನೀರಿನ ಕಾಲುವೆಯನ್ನು 15 ದಿನಗಳೊಳಗೆ ಮುಚ್ಚದಿದ್ದರೆ ಎಲ್ಲಾ ಕಾಲುವೆಗಳನ್ನು ಸಂಪೂರ್ಣ ಮುಚ್ಚಲಾಗುವುದು ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡ ವಸಂತ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳ ಕೆರೆಗಳಿಗೆ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ ನೀರಿನ ಕಾಲುವೆಯನ್ನು 15 ದಿನಗಳೊಳಗೆ ಮುಚ್ಚದಿದ್ದರೆ ಎಲ್ಲಾ ಕಾಲುವೆಗಳನ್ನು ಸಂಪೂರ್ಣ ಮುಚ್ಚಲಾಗುವುದು ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡ ವಸಂತ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ಮತ್ತು ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಕೆರೆಗಳಿಗೆ ಬಿಡಲಾಗುತ್ತಿದ್ದು, ಕಳೆದ 10 ವರ್ಷಗಳಿಂದ ಹೋರಾಟ ಮಾಡಲಾಗಿದೆ. ಈಗಾಗಲೇ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ದೊಡ್ಡಬಳ್ಳಾಪುರ ನಗರಸಭೆಯ ಆಯುಕ್ತರು, ದೊಡ್ಡಬಳ್ಳಾಪುರ ತಹಸೀಲ್ದಾರ್, ಬೆಂ.ಗ್ರಾ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ, ವಿಷಯುಕ್ತ ನೀರನ್ನು ಜೀವಂತ ಕೆರೆಗಳಿಗೆ ಹರಿಸಿ ಈ ಭಾಗದ ಜನರ ಕುಡಿಯುವ ನೀರಿನ ಹಕ್ಕನ್ನು ಕಸಿಯಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಧಾನ ಪೀಠದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಅಪಾಯಕಾರಿ ತ್ಯಾಜ್ಯ ನೀರು ಕೆರೆಗಳಿಗೆ ಹರಿಯುತ್ತಿರುವ ಸಾಕ್ಷ್ಯ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ಪೀಳಿಗೆಯ ಆರೋಗ್ಯ, ಪರಿಸರದ ಉಳಿವಿನ ದೃಷ್ಟಿಯಿಂದ ಜೀವಜಲವನ್ನು ರಕ್ಷಿಸಿಕೊಳ್ಳಲು ರಾಸಾಯನಿಕ ಹರಿಯುವ ನಾಲ್ಕು ಕಾಲುವೆಗಳನ್ನು ಮುಚ್ಚಲು ಅರ್ಕಾವತಿ ನದಿ ಹೋರಾಟ ಸಮಿತಿ ತೀರ್ಮಾನಿಸಿದೆ ಎಂದು ಹೇಳಿದರು.

ವಕೀಲ‌ ಸತೀಶ್ ಮಾತನಾಡಿ, ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳ ಅಂತರ್ಜಲ ವಿಷವಾಗಿದೆ. ಅಧಿಕಾರಿ, ಜನಪ್ರತಿನಿಧಿಗಳು, ಸಚಿವರ ಗಮಮಕ್ಕೆ ತಂದು ಲಿಖಿತ ದೂರು ನೀಡಿ, ಪ್ರತಿಭಟಿಸಿದರೂ ಈವರೆಗೆ ಕುಂಭದ್ರೋಣ ನಿದ್ರೆಯಿಂದ ವ್ಯವಸ್ಥೆ ಎಚ್ಚೆತ್ತಿಲ್ಲ. ಇಂಡಿಗೋ ಕಾರ್ಖಾನೆ ಮುಂದಿರುವ ಕಾಲುವೆ, ನಗರಸಭೆಯ ಒಳಚರಂಡಿ ಕಾಲುವೆ, ಇಂಡಿಕ್‌ ಕಂಪನಿ ಮುಂಭಾಗದ ಕಾಲುವೆ ಹಾಗೂ ಬಾಶೆಟ್ಟಿಹಳ್ಳಿ ಕೆರೆಯಿಂದ ಚಿಕ್ಕತುಮಕೂರು ಕೆರೆಗೆ ಬರುವ ರಾಜಕಾಲುವೆಗಳನ್ನು ಅಧಿಕಾರಿಗಳು ತಕ್ಷಣವೇ ಬಂದ್‌ ಮಾಡಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಸಮಿತಿ ಆ ಕೆಲಸವನ್ನು ಮಾಡಲಿದೆ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್ ಮಾತನಾಡಿ, ತಂತ್ರಜ್ಞಾನ ಇಷ್ಟು ಮುಂದುವರೆದಿದ್ದರೂ ಕಳೆದ ಹತ್ತು ವರ್ಷಗಳಿಂದ ಈ ಭಾಗದ ಕಾರ್ಖಾನೆಗಳು ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೆ ಕಲುಷಿತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಈಗಾಗಲೇ ಅನೇಕ ಪ್ರತಿಭಟನೆಗಳು, ಧರಣಿ ಸತ್ಯಾಗ್ರಹ ನಡೆದರು ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸಿದ್ದಾರೆ. ಈ ನೀರಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದ್ದು ಆತಂಕಕಾರಿಯಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಖಾನೆಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು ಈ ಕಾಲುವೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೂರ್ತಿ ದೊಂಬರಹಳ್ಳಿ, ಗೋಪಾಲ್, ವಿಜಯಕುಮಾರ್, ನರಸಿಂಹಮೂರ್ತಿ, ರಮೇಶ್, ಅಂಜೀನಪ್ಪ, ಸುಮಂತಪ್ಪ ಇತರರಿದ್ದರು.

4ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡ ವಸಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV