- ಪೂರ್ವಭಾವಿ ಸಭೆಯಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಶ್ರೀ
ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ, ಲಿಂಗಾಯತ ಎನ್ನುವುದೆಲ್ಲಾ ಮುಗಿದ ಕಥೆಯಾಗಿದ್ದು, ಬಸವಣ್ಣನನ್ನು ಒಪ್ಪಿಕೊಳ್ಳುವ ಎಲ್ಲರೂ ನಮ್ಮವರೇ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ನುಡಿದರು.ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಶುಕ್ರವಾರ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಲಿಂಗಾಯತ ಎಂಬುದನ್ನು ಸೇರಿಸಿದ ನಂತರ ಸಮಸ್ಯೆಯೇ ಬಗೆಹರಿದಿದೆ ಎಂದರು.
ಬಸವಾದಿ ಶರಣರ ತತ್ವಗಳನ್ನು ಎಲ್ಲೆಡೆ ಪ್ರಸಾರ ಮಾಡುವುದು, ಗ್ರಾಮ, ಪಟ್ಟಣಗಳ ಜನರನ್ನು ಸಂಘಟಿಸುವುದು, ಧಾರ್ಮಿಕ ಸಭೆಗಳನ್ನು ಏರ್ಪಡಿಸಿ, ಬಸವಾದಿ ಶರಣರು ಬೋಧಿಸಿದ ಧಾರ್ಮಿಕ ವಿಚಾರ ಆಚರಣೆಯಲ್ಲಿ ತರುವುದೇ ಅಭಿಯಾನದ ಉದ್ದೇಶ. ಬಸವಾದಿ ಶರಣರ ಭಿತ್ತಿಚಿತ್ರಗಳ ಬಸವ ರಥದ ಮೆರವಣಿಗೆ, ಸಾರ್ವಜನಿಕರು, ವಿದ್ಯಾರ್ಥಿ, ಯುವಜನರ ಜೊತೆಗೆ ಸಂವಾದ, ಪಾದಯಾತ್ರೆ, ಬಹಿರಂಗ ಸಭೆ, ವಚನ ಸಂಗೀತ, ಉಪನ್ಯಾಸ, ನಾಟಕ ಪ್ರದರ್ಶನ ಇತ್ಯಾದಿ ಚಟುವಟಿಕೆ ತಿಂಗಳ ಕಾಲ ನಡೆಯಲಿವೆ ಎಂದು ವಿವರಿಸಿದರು.
ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ, ಹಿರಿಯ ಸಾಹಿತಿ ಎಸ್.ಟಿ. ಶಾಂತ ಗಂಗಾಧರ ಇತರರು ಇದ್ದರು. ಬಸವಪರ ಸಂಘಟನೆಗಳ ಪ್ರತಿನಿಧಿಗಳು, ಬಸವಾಭಿಮಾನಿಗಳು ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಸಲಹೆ-ಸೂಚನೆ ನೀಡುವ ಜೊತೆಗೆ ಆರ್ಥಿಕ ದೇಣಿಗೆ ಘೋಷಣೆ ಮಾಡಿದರು.
-4ಕೆಡಿವಿಜಿ6.ಜೆಪಿಜಿ: ಡಾ.ಗುರುಬಸವ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸಭೆ ಉದ್ಘಾಟಿಸಿದರು.