ಹೆಬ್ರಿ: ಜುಲೈ 7ರಂದು ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ಥಳಿ ಅನಾವರಣ, ಜೀವನ ಚರಿತ್ರೆ ಬಿಡುಗಡೆ

KannadaprabhaNewsNetwork |  
Published : Jul 4, 2025 11:54 PM IST
32 | Kannada Prabha

ಸಾರಾಂಶ

ಮಾಜಿ ಶಾಸಕ ಗೋಪಾಲ ಭಂಡಾರಿ ಸ್ಮರಣಾರ್ಥ ವೃತ್ತ ನಿರ್ಮಾಣ, ಪುತ್ಥಳಿ ಅನಾವರಣ ಹಾಗೂ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ 7ರಂದು ಹೆಬ್ರಿಯಲ್ಲಿ ಜರುಗಲಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಮತ್ತು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ವತಿಯಿಂದ ಮಾಜಿ ಶಾಸಕ ಗೋಪಾಲ ಭಂಡಾರಿ ಸ್ಮರಣಾರ್ಥ ವೃತ್ತ ನಿರ್ಮಾಣ, ಪುತ್ಥಳಿ ಅನಾವರಣ ಹಾಗೂ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ 7ರಂದು ಹೆಬ್ರಿಯಲ್ಲಿ ಜರುಗಲಿದೆ.

ಬುಧವಾರ ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾಹಿತಿ ನೀಡಿ, ಭಂಡಾರಿ ಅವರ 48 ವರ್ಷಗಳ ರಾಜಕೀಯ ಮತ್ತು ಸಮಾಜ ಸೇವೆಯು ನಮಗೆಲ್ಲಾ ಆದರ್ಶ. ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರು ಮಹತ್ವಪೂರ್ಣ ಕೊಡುಗೆ ನೀಡಿದವರು. ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮ ವಿವರ:

ಹೆಬ್ರಿಯ ರಾಜ್ಯ ಹೆದ್ದಾರಿ ಬಚ್ಚಪ್ಪು ತಿರುವಿನಲ್ಲಿ ನಿರ್ಮಿಸಲಾದ ವೃತ್ತವನ್ನು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದಾರೆ. ಬಳಿಕ ಗೋಪಾಲ ಭಂಡಾರಿ ಪುತ್ಥಳಿ ಅನಾವರಣ ಮಾಡಲಾಗುವುದು. ಮಧ್ಯಾಹ್ನ 3.30 ರಿಂದ ಹೆಬ್ರಿಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿರುವ ಸಭೆಯನ್ನು ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ.

ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಗೋಪಾಲ ಭಂಡಾರಿ ಅವರ ‘ಜೀವನ ಚರಿತ್ರೆ’ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ.ವಿಧಾನ ಪರಿಷತ್‌ ಸದಸ್ಯ ಅಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕಿಮ್ಮನೆ ರತ್ನಾಕರ, ಗೋಪಾಲ ಭಂಡಾರಿ ಅವರ ಧರ್ಮಪತ್ನಿ ಪ್ರಕಾಶಿನಿ ಗೋಪಾಲ ಭಂಡಾರಿ ಹಾಗೂ ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಮಾತನಾಡಿ, ಭಂಡಾರಿಯವರ ಪಾರದರ್ಶಕ ಮತ್ತು ಸದಾಚಾರ ರಾಜಕೀಯ ಜೀವನ ಎಲ್ಲರಿಗೂ ದಿಕ್ಕು ತೋರಿಸುವಂತಿದೆ. ಅವರು ಕಾಂಗ್ರೆಸ್ ಪಕ್ಷದ ಮಹತ್ವದ ಯೋಜನೆಗಳನ್ನೂ ಯಶಸ್ವಿಯಾಗಿ ಅನುಷ್ಠಾನಗೊಳಿಸಿದವರು ಎಂದರು.

ಪಂಚಾಯಿತಿ ಸದಸ್ಯ ಎಚ್.ಬಿ. ಸುರೇಶ್, ಸಂಪಾದಕ ಬಳಗದ ಟಿ.ಜಿ. ಆಚಾರ್ಯ, ಕೋಶಾಧಿಕಾರಿ ಜನಾರ್ದನ್ ಎಚ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ ದೇವಾಡಿಗ ಮೊದಲಾದವರು ಇದ್ದರು.

ಕಾರ್ಯದರ್ಶಿ ನವೀನ್ ಅಡ್ಯಂತಾಯ ಸ್ವಾಗತಿಸಿದರು. ಚಾರ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ವಂದಿಸಿದರು.

PREV