ಚಿತ್ರದುರ್ಗ ಸಂಸತ್‌ ಸೀಟ್ ಗೆಲ್ಲೋಕೆ 15 ದಿನ ಸಾಕು

KannadaprabhaNewsNetwork |  
Published : Jun 05, 2024, 12:30 AM IST
ಚಿತ್ರದುರ್ಗ ಪಾರ್ಲಿಮೆಂಟ್ ಸೀಟ್ ಗೆಲ್ಲೋಕೆ 15 ದಿನ ಸಾಕು | Kannada Prabha

ಸಾರಾಂಶ

ಹೊಸಬರು, ಹೊರಗಿನವರು ಎಂಬಿತ್ಯಾದಿ ರಗಳೆಗಳಾಚೆ ಚಿತ್ರದುರ್ಗದ ಮಂದಿ ಗೆಲ್ಲಿಸಿಕೊಂಡು ನಮ್ಮವರನ್ನಾಗಿಸಿಕೊಡಿದ್ದಾರೆ. ಬಿಜೆಪಿಯ ಗೋವಿಂದ ಕಾರಜೋಳ ಅಂತಹದ್ದೊಂದು ಸಂಪ್ರದಾಯವನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದ್ದಾರೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಲೋಕಸಭೆ ಕ್ಷೇತ್ರ ಗೆಲ್ಲೋಕೆ ವರ್ಷಗಟ್ಟಲೆ ತಾಲೀಮು ಏನೂ ಬೇಕಾಗಿಲ್ಲ. ಕೇವಲ ಹದಿನೈದು ದಿನ ಸಾಕು ಎಂಬ ಸಂಗತಿ ಮತ್ತೊಮ್ಮೆ ಸಾಬೀತಾಗಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ನಂತರ ಬಿ.ಫಾರಂ ಕೈಲಿಡಿದುಕೊಂಡು ಬಂದವರೆಲ್ಲ ಇಲ್ಲಿ ಗೆದ್ದಿದ್ದಾರೆ. ಹೊಸಬರು, ಹೊರಗಿನವರು ಎಂಬಿತ್ಯಾದಿ ರಗಳೆಗಳಾಚೆ ಚಿತ್ರದುರ್ಗದ ಮಂದಿ ಗೆಲ್ಲಿಸಿಕೊಂಡು ನಮ್ಮವರನ್ನಾಗಿಸಿಕೊಡಿದ್ದಾರೆ. ಬಿಜೆಪಿಯ ಗೋವಿಂದ ಕಾರಜೋಳ ಅಂತಹದ್ದೊಂದು ಸಂಪ್ರದಾಯ ಮುಂದುವರಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ಎ.ನಾರಾಯಣಸ್ವಾಮಿ ತಾವು ಸ್ಪರ್ಧಿಸುವುದಿಲ್ಲವೆಂಬ ಕಾರಣಕ್ಕೆ ಪೈಪೋಟಿ ಏರ್ಪಟ್ಟಿತ್ತು. ರಘುಚಂದನ್, ಮಾದಾರಶ್ರೀ ಸೇರಿದಂತೆ ಹತ್ತು ಮಂದಿ ಆಕಾಂಕ್ಷಿಗಳಿದ್ದರು. ಟಿಕೆಟ್ ಗಾಗಿ ಒಂದಿಷ್ಟು ಗದ್ದಲಗಳು ನಡೆದಿದ್ದವು. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ನಂತರ ಬಿ.ಫಾರಂ ಕೈಲಿಡಿದುಕೊಂಡು ಬಂದಿದ್ದ ಗೋವಿಂದ ಕಾರಜೋಳ ಕಣಕ್ಕಿಳಿದಿದ್ದರು. ಕೇವಲ ಹದಿನೈದು ದಿನದ ಅಂತರದಲ್ಲಿ ಅವರಿಗೆ ಕ್ಷೇತ್ರ ಸುತ್ತಲೂ ಸಾಧ್ಯವಾಗಲಿಲ್ಲ. ಅಲ್ಲಲ್ಲಿ ಪ್ರಚಾರ ಸಭೆಗಳ ನಡೆಸಿ ಸಲೀಸಾಗಿ ಗೆದ್ದು ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ತಾಲೀಮು ಮಾಡಿದ್ದ ಚಂದ್ರಪ್ಪ ಸೋಲು ಅನುಭವಿಸಿದ್ದಾರೆ.

ಹಿಂದೊಮ್ಮೆ ಚಿತ್ರನಟ ಶಶಿಕುಮಾರ್ ಹಾಲಪ್ಪ ಚಿತ್ರದ ಶೂಟಿಂಗ್‌ಗೆಂದು ಚಿತ್ರದುರ್ಗಕ್ಕೆ ಬಂದಿದ್ದರು. ಚಿತ್ರದುರ್ಗ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಶೂಟಿಂಗ್ ಬಂದ ಶಶಿಕುಮಾರ್ ನೇರವಾಗಿ ಜೆಡಿಯುನಿಂದ (1999 ರಲ್ಲಿ) ಕಣಕ್ಕಿಳಿದಿದ್ದರು. ಜೆಡಿಯು ಬಿ.ಫಾರಂ ಇಬ್ಬರಿಗೆ ಕೊಡಲಾಗಿತ್ತು. ಇರ್ಫಾನುಲ್ಲಾ ಶರೀಫ್ ಅವರೂ ತಂದಿದ್ದರು. ಆದರೆ ನಾಮಪತ್ರ ಸಲ್ಲಿಸುವ ಕಡೇ ಗಳಿಗೆಯಲ್ಲಿ ಶಶಿಕುಮಾರ್ ಮೊದಲು ಸಲ್ಲಿಸಿದ್ದರಿಂದ ಅವರ ನಾಮಪತ್ರ ಸಿಂಧು ಮಾಡಲಾಗಿತ್ತು. ಶಶಿಕುಮಾರ್ ಕೂಡ ಎಲ್ಲಿಗೂ ಹೋಗಲಿಲ್ಲ. ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಎಷ್ಟು ವಿಧಾನಸಭೆ ಕ್ಷೇತ್ರಗಳು ಇವೆ ಎಂದು ಅಷ್ಟಾಗಿ ಗೊತ್ತರಲಿಲ್ಲ. 11,178 ಮತಗಳಿಂದ ಕಾಂಗ್ರೆಸ್ ನ ಸಿ.ಪಿ.ಮೂಡಲಗಿರಿಯಪ್ಪ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು.

2009 ರಲ್ಲಿ ಜರುಗಿದ ಚುನಾವಣೆಯಲ್ಲಿ ಅಮೇರಿಕಾದಿಂದ ಬಂದು ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜನಾರ್ಧನಸ್ವಾಮಿ, ಕಾಂಗ್ರೆಸ್‍ನ ಬಿ.ತಿಪ್ಪೇಸ್ವಾಮಿ ಅವರಿಗಿಂತ 1,35,656 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಇವರೂ ಕೂಡ ಬಿಜೆಪಿ ಬಿ.ಫಾರಂ ಪಡೆದು ಕಡೇ ಹದಿನೈದು ದಿನ ಇರುವಾಗ ನೇರವಾಗಿ ಕಣಕ್ಕೆ ಇಳಿದಿದ್ದರು.

2019 ರಲ್ಲಿ ಅಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡೇ ಗಳಿಗೆಯಲ್ಲಿ ದೂರದ ಆನೇಕಲ್‌ನಿಂದ ಬಂದಿದ್ದ ಎ.ನಾರಾಯಣಸ್ವಾಮಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ ಅವರನ್ನು 80,178 ಹೆಚ್ಚು ಮತಗಳಿಂದ ಮಣಿಸಿದ್ದರು. ನಾರಾಯಣಸ್ವಾಮಿ ಅವರಿಗೂ ಕೂಡ ಕ್ಷೇತ್ರ ಸುತ್ತಲೂ ಸಾಧ್ಯ ವಾಗಿರಿಲ್ಲ. ಮೋದಿ ಅಲೆಯಲ್ಲಿ ಗೆದ್ದು ಬಂದಿದ್ದರು. ಅಲ್ಲದೇ ಮೋದಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಹಾಗಾಗಿ ಈ ಬಾರಿ ಇದೇ ಮಾದರಿಯಲ್ಲಿ ಗೋವಿಂದ ಕಾರಜೋಳ ಚಿತ್ರದುರ್ಗಕ್ಕೆ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಕೇಂದ್ರದಲ್ಲಿ ಸಚಿವರೂ ಆಗುತ್ತಾರೆ ಎಂಬ ಪ್ರಸ್ತಾಪಗಳು ಬಿಜೆಪಿ ವಲಯದಲ್ಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ