ಕನ್ನಡಪ್ರಭ ವಾರ್ತೆ ಮಧುಗಿರಿ
ಮಧುಗಿರಿ ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸುವ ಚೋಳೇನಹಳ್ಳಿ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರವಾಸೋದ್ಯಮಕ್ಕೆ ಅಧಿಕ ಒತ್ತು ಕೊಡುವ ನಿಟ್ಟಿನಲ್ಲಿ ಚೋಳೇನಹಳ್ಳಿ ಕೆರೆಯಲ್ಲಿ ಸಾರ್ವಜನಿಕರಿಗೆ 15 ದಿನಗಳವರೆಗೆ ದೋಣಿ ವಿಹಾರ ಕಲ್ಪಿಸಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದ ಸಚಿವ ರಾಜಣ್ಣ ,ಈ ಕೆರೆಯಲ್ಲಿ ನೀರು ಕಡಿಮೆಯಾದಾಗ ಕೆರೆಯ ಹೂಳು ತೆಗೆಸಿ ಏರಿ ಎತ್ತರಿಸಿ ಕೆರೆಯ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ ಸಮಗ್ರ ಕೆರೆ ಅಭಿವೃದ್ಧಿಗೊಳಿಸಲಾಗುವುದು.ಈ ಕೆರೆ ಅತ್ಯಂತ ಅಚ್ಚುಕಟ್ಟು ಪ್ರದೇಶವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದ್ದರಿಂದ ಈ ಕೆರೆಯನ್ನು ಸುಂದರಗೊಳಿಸಿ ಪ್ರವಾಸಿಗರ,ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ಶಾಶ್ವತವಾಗಿ ದೋಣಿ ವಿವಾರದ ಕೇಂದ್ರವನ್ನಾಗಿ ರೂಪಿಸುವುದಾಗಿ ಸಚಿವ ರಾಜಣ್ಣ ಭರವಸೆ ನೀಡಿದರು.ಚೋಳೇನಹಳ್ಳಿ ಕೆರೆ ತುಂಬಿದಾಗಲೆಲ್ಲಾ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ಗೇವಿಯ ತೆಪ್ಪೋತ್ಸವ ಆಚರಿಸೋಣ. ಈ ಮೂಲಕ ನಮ್ಮ ಕ್ಷೇತ್ರದ ಜನತೆಗೆ ತಾಯಿ ದಂಡಿಮಾರಮ್ಮ ಶಾಂತಿ, ನೆಮ್ಮದಿ ಕರುಣಿಸಿ ಸಕಾಲಕ್ಕೆ ಮಳೆ , ಬಂದು ಬೆಳೆಯಾಗಿ, ಕೃಷಿಕರು ಹಾಗೂ ಕೂಲಿಕಾರ್ಮಿಕರು ನೆಮ್ಮದಿಯ ಜೀವನ ನಡೆಸುವ ಮುಖೇನ ಸುಭೀಕ್ಷೆ ಉಂಟು ಮಾಡಲಿ. ತೆಪ್ಪೋತ್ಸವ ಆಚರಣೆಗಾಗಿಯೇ ಕೆರೆಯ ಅಂಗಳದಲ್ಲಿ ಒಂದು ಸುಂದರ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬೋಟ್ ಸಂಚರಿಸುವ ವ್ಯವಸ್ತೆ ಮಾಡಲಾಗವುದು ಎಂದರು.
ಪಾವಗಡ, ಕೊರಟಗೆರೆ, ಶಿರಾ ಸೇರಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಸಮಯದಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಲಿದೆ ಎಂದರು.
ಈ ಭಾಗದ ಬಹು ದಿನಗಳ ಬೇಡಿಕೆಯಾದ ಏಕಶಿಲಾ ಬೆಟ್ಟಕ್ಕೆ ರೋಪವೇ ಅಳವಡಿಸುವ ಕಾಮಗಾರಿಗೆ ಸಂಬಂಧಪಟ್ಟ ಸಟಿವರು, ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿದ್ದು ಟೆಂಡರ್ ಕರೆಯಲಾಗಿದೆ . ಅತಿ ಶೀಘ್ರ ಕಾಮಗಾರಿ ಕೈಗೆತ್ತಿಕೊಂಡು ಒಂದೇ ವರ್ಷದಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.