ಬೆಳಗಾವಿ: ದೇಶದಲ್ಲಿನ ಜನಸಂಖ್ಯಾ ಅಸಮತೋಲನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌), ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ. ಜೊತೆಗೆ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣದ ದುರುಪಯೋಗದ ಬಗ್ಗೆಯೂ ಆರ್‌ಎಸ್‌ಎಸ್‌ ವಿಷಾದ ವ್ಯಕ್ತಪಡಿಸಿದೆ.

ಆರ್‌ಎಸ್‌ಎಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮೂರು ದಿನಗಳ ಬೈಠಕ್ ಭಾನುವಾರ ಬೆಳಗಾವಿಯಲ್ಲಿ ಸಮಾರೋಪಗೊಂಡಿತು. ಬೈಠಕ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್, ದೇಶದ ಜನಸಂಖ್ಯಾ ಅಸಮತೋಲನ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದ್ದು, ಜನಸಂಖ್ಯಾ ಹೆಚ್ಚಳದಿಂದಾಗುವ ಸವಾಲುಗಳು ಮತ್ತು ಜನಗಣತಿ ಬಗ್ಗೆ ಚರ್ಚಿಸಲಾಗಿದೆ. ಅದೇ ರೀತಿಯಾಗಿ, ಮಾದಕ ವಸ್ತುಗಳ ಬಳಕೆ, ಅದರಿಂದ ಕುಟುಂಬ ವ್ಯವಸ್ಥೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳು ಹಾಗೂ ಸಾಮಾಜಿಕ ಮೌಲ್ಯಗಳ ಕುಸಿತದ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಈ ವಿಷಯಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ:

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣದ ದುರುಪಯೋಗದ ಆರೋಪಗಳ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಕೋಟ್ಯಂತರ ರಾಮಭಕ್ತರ ಅಪಾರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ಬಾರದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ. ಎಸ್‌ಐಟಿ ತನಿಖೆಯಿಂದ ಈ ಹಗರಣದ ಸತ್ಯಾಂಶ ಹೊರಬರಲಿದೆ ಎಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಘಟನೆಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು ಎಂದು ಸಂಘ ಬಲವಾಗಿ ಒತ್ತಾಯಿಸಿದೆ ಎಂದರು.


ಸಂಘಟನೆ, ವಿಸ್ತರಣೆ ಕುರಿತು ಚರ್ಚೆ:

ಸಂಘದ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸಂಘದ ಮುಂದಿನ ಕಾರ್ಯತಂತ್ರ, ಸಂಘಟನೆಯ ವಿಸ್ತರಣೆ, ಸಾಮಾಜಿಕ ಸವಾಲುಗಳು ಹಾಗೂ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಪದಾಧಿಕಾರಿಗಳು ಸೇರಿದಂತೆ ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿದ್ದ 226 ಪ್ರಚಾರಕರು ಬೈಠಕ್‌ನಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮಾರ್ಚ್ ನಂತರ ದೇಶದಾದ್ಯಂತ ನಡೆದ 83 ಸಂಘ ಶಿಕ್ಷಾ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳ ಪರಿಶೀಲನೆ ನಡೆಸಲಾಯಿತು. ಈ ತರಬೇತಿ ಶಿಬಿರಗಳ ಮೂಲಕ ಒಟ್ಟು 18,842 ಸ್ವಯಂ ಸೇವಕರು ತರಬೇತಿ ಪಡೆದಿರುವ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ತರಬೇತಿ ಪಡೆದ ಕಾರ್ಯಕರ್ತರನ್ನು ಗ್ರಾಮ, ನಗರ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಶಾಖೆಗಳ ವಿಸ್ತರಣೆ, ಹೊಸ ಪ್ರದೇಶಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದು, ಯುವಜನತೆ, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ವೃತ್ತಿ ಕ್ಷೇತ್ರಗಳ ಜನರೊಂದಿಗೆ ಸಂಪರ್ಕ ಬಲಪಡಿಸುವುದು, ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವುದು ಸೇರಿದಂತೆ ಸಂಘದ ಕಾರ್ಯವಿಧಾನದ ವಿವಿಧ ಆಯಾಮಗಳ ಕುರಿತು ಸಭೆಯಲ್ಲಿ ಸಮಗ್ರ ಅವಲೋಕನ ನಡೆಸಲಾಯಿತು.

ಗ್ರಾಮ ವಿಕಾಸ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣೆ, ವಿಪತ್ತು ನಿರ್ವಹಣೆ, ಸಾಮಾಜಿಕ ಸಾಮರಸ್ಯ ಹಾಗೂ ಸೇವಾ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು. ದೇಶದ ಪ್ರಸ್ತುತ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸನ್ನಿವೇಶಗಳ ಕುರಿತು ಪ್ರಚಾರಕರು ಸಭೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ಅಭಿಪ್ರಾಯ ವಿನಿಮಯ ನಡೆಸಿದರು.

ಮೂರು ದಿನಗಳ ಬೈಠಕ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಸಂಘಟನಾ ಚಟುವಟಿಕೆಗಳ ವಿಮರ್ಶೆ, ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ವೃದ್ಧಿ, ಶತಮಾನೋತ್ಸವ ವರ್ಷದ ಉಳಿದ ಕಾರ್ಯಕ್ರಮಗಳ ರೂಪುರೇಷೆ, ಸೇವಾ ಕಾರ್ಯಗಳ ವಿಸ್ತರಣೆ ಹಾಗೂ ಮುಂದಿನ ದಿನಗಳ ಸಂಘಟನಾ ಕಾರ್ಯತಂತ್ರಗಳ ಕುರಿತು ಸವಿಸ್ತಾರ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ.

- ಸುನೀಲ್ ಅಂಬೇಕರ್, ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ.

ಬೆಳಗಾವಿಯಲ್ಲಿ 3 ದಿನದಿಂದ ನಡೆದಿದ್ದ ಆರ್‌ಎಸ್ಎಸ್‌ ಭಾರತೀಯ ಪ್ರಾಂತ ಪ್ರಚಾರಕರ ಸಭೆ

ಸಭೆಯಲ್ಲಿ ದೇಶದಲ್ಲಿನ ಜನಸಂಖ್ಯಾ ಅಸಮತೋಲನ, ಹೆಚ್ಚಳದಿಂದಾಗುವ ಸವಾಲು ಬಗ್ಗೆ ಚರ್ಚೆ

ಈ ಸಮಸ್ಯೆ ತಡೆಗೆ ಎಲ್ಲರಿಗೂ ಅನ್ವಯವಾಗುವ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೆ ಆಗ್ರಹ

ಹೆಚ್ಚುತ್ತಿರುವ ಡ್ರಗ್ಸ್‌ ಬಳಕೆ, ಅದರಿಂದ ಕುಟುಂಬಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಕಳವಳ

ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಡ್ರಗ್ಸ್‌ ತಡೆ ಜಾಗೃತಿ ಅಭಿಯಾನಗಳನ್ನು ಹೆಚ್ಚಿಸಲು ನಿರ್ಧಾರ

ರಾಮಮಂದಿರಲ್ಲಿ ಮತ್ತೆ ಕಳವು ಪ್ರಕರಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಆಗ್ರಹ