ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಅವಹೇಳನ ಹಾಗೂ ಮಾನಹಾನಿ ಆರೋಪದ ದೂರು ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಅವಹೇಳನ ಹಾಗೂ ಮಾನಹಾನಿ ಆರೋಪದ ದೂರು ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಆರ್‌ಎಸ್‌ಎಸ್ ಕಾರ್ಯಕರ್ತ ಎ.ತೇಜಸ್ ಎಂಬುವವರು ದಾಖಲಿಸಿದ್ದ ಖಾಸಗಿ ದೂರು ಕುರಿತು ಶನಿವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ದೂರನ್ನು ವಿಚಾರಣೆಗೆ ಪರಿಗಣಿಸಿದೆ. ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧದ ಆರೋಪ ಕೈಬಿಟ್ಟಿದೆ. ಉಳಿದಂತೆ ಪ್ರಕರಣದ 1ನೇ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು 3ನೇ ಆರೋಪಿ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 356 ಅಡಿ(ಮಾನಹಾನಿ) ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿ ಇಬ್ಬರೂ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.
ಏನಿದು ಪ್ರಕರಣ?:
ಆರ್‌ಎಸ್‌ಎಸ್ ಕಾರ್ಯಕರ್ತ ಎ.ತೇಜಸ್ ಎಂಬುವವರು ನ.5ರಂದು ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
‘ಸಚಿವ ಪ್ರಿಯಾಂಕ್ ಖರ್ಗೆ ಅವರು ಅ.4ರಂದು ಮುಖ್ಯಮಂತ್ರಿಗೆ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು. ಸರ್ಕಾರಿ ಶಾಲಾ, ಕಾಲೇಜುಗಳ ಮೈದಾನಗಳಲ್ಲಿ ಆರ್‌ಎಸ್ಎಸ್ ಸಂಘವು ಬೈಠಕ್ ಮತ್ತು ಇತರೆ ಚಟುವಟಿಕೆಗಳನ್ನು ಮಾಡದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
‘ಸಂಘದವರು ಸಮಾಜದಲ್ಲಿ ಭಯದ ವಾತಾವರಣ ಉಂಟು ಮಾಡುತ್ತಾರೆ. ಮಕ್ಕಳು ಮತ್ತು ಯುವಕರಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತಾರೆ. ಸಂಘದವರು ಮೂಲಭೂತವಾದಿ ಸಿದ್ಧಾಂತಗಳನ್ನು ಹೊಂದಿದ್ದಾರೆ. ಹೀಗಾಗಿ ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವಂತೆ ಪತ್ರದಲ್ಲಿ ಕೋರಿದ್ದಾರೆ. ಈ ಪತ್ರವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಬಳಿಕ ಆರ್‌ಎಸ್‌ಎಸ್ ಬಗ್ಗೆ ಎಕ್ಸ್ ಖಾತೆಯಲ್ಲಿ ಕೆಲ ಪೋಸ್ಟ್ ಮಾಡಿದ್ದಾರೆ’ ಎಂದು ದೂರಿದ್ದರು.
ತಾಲಿಬಾನ್ ಮನಸ್ಥಿತಿ ಎಂದಿದ್ದ ದಿನೇಶ್:
‘ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಎಕ್ಸ್ ಖಾತೆಯ ಪೋಸ್ಟ್‌ಗಳನ್ನು ಅನುಸರಿಸಿ, ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ನಮ್ಮ ಸಹೋದ್ಯೋಗಿಯನ್ನು ಕೊಲ್ಲುವ ಬೆದರಿಕೆ ಹಾಕುತ್ತಾರೆಂದರೆ, ಅವರದು ತಾಲಿಬಾನ್ ಮನಸ್ಥಿತಿ ಅಲ್ಲವೇ? ಗೌರಿ ಲಂಕೇಶ್, ಪಾನ್ಸರೆ, ಕಲಬುರಗಿ ಅವರ ಹತ್ಯೆಯಲ್ಲಿ ಏಕೆ ನೇರವಾಗಿ ಭಾಗಿಯಾಗುತ್ತಾರೆ? ಗಾಂಧಿ ಕೊಂದ ಗೋಡ್ಸೆಯನ್ನು ಇವರು ಆರಾಧನೆ ಮಾಡುತ್ತಾರೆ. ಗೋಡ್ಸೆ ಪರ ನಿಂತಿರುತ್ತಾರೆ. ಆದರೆ, ನಾವು ಗಾಂಧಿ ಮತ್ತು ಅವರ ತತ್ವದ ಪರ ನಿಂತಿರುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆಯನ್ನು ಮಾಧ್ಯಮಗಳ ಎದುರು ಹೇಳಿದ್ದಾರೆ’ ಎಂದು ಆರೋಪಿಸಿದ್ದರು.
ಚಡ್ಡಿ ಒಳಗೆ ಏನೂ ಇಲ್ಲ ಎಂದಿದ್ದ ನಲಪಾಡ್:
‘ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವಾಗ, ‘ಆರ್‌ಎಸ್‌ಎಸ್‌ನವರಿಗೆ ಚಡ್ಡಿ ಒಳಗಡೆ ಏನೂ ಇಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ಈ ಮೂವರು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಅವಹೇಳನಕಾರಿ, ಮಾನಹಾನಿಕಾರಿ ಹಾಗೂ ಬೆದರಿಕೆವೊಡ್ಡುವ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆರ್‌ಎಸ್ಎಸ್ ಬಗ್ಗೆ ಸುಳ್ಳು ಹಾಗೂ ಆಧಾರ ರಹಿತ ಹೇಳಿಕೆಗಳನ್ನು ನೀಡಿ ಸಂಘದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಹಾಗೂ ಮಾನಹಾನಿ ಮಾಡಿರುವ ಈ ಮೂವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಮನವಿ ಮಾಡಿದ್ದರು.
ಏನಿದು ಪ್ರಕರಣ?
- ಕಳೆದ ವರ್ಷ ಆರೆಸ್ಸೆಸ್ ಚಟುವಟಿಕೆಗೆ ನಿರ್ಬಂಧ ಕೋರಿದ್ದ ಪ್ರಿಯಾಂಕ್
- ಪ್ರಿಯಾಂಕ್‌ರನ್ನು ಬೆಂಬಲಿಸಿ ದಿನೇಶ್ ಗುಂಡೂರಾವ್, ನಲಪಾಡ್ ಪೋಸ್ಟ್
- ಇವುಗಳಲ್ಲಿ ಅವಹೇಳನಕಾರಿ ಅಂಶ ಎಂದು ತೇಜಸ್ ಎಂಬುವರಿಂದ ದೂರು
- ಇದನ್ನು ಆಧರಿಸಿ ಕೋರ್ಟ್‌ನಿಂದ ಪ್ರಿಯಾಂಕ್, ನಲಪಾಡ್‌ಗೆ ಸಮನ್ಸ್

