ಕೊಟ್ಟೂರು: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಲ್ಲಬೇಕಿದ್ದ ₹5 ಸಾವಿರ ಕೋಟಿ ಲೆಕ್ಕ ಕೊಟ್ಟು ನಂತರ ಪ್ರಿಯಾಂಕ್‌ ಖರ್ಗೆ ಬೇರೆ ವಿಷಯಗಳ ಬಗ್ಗೆ ಮಾತಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲೂಕಿನ ಉಜ್ಜಿನಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್‌ ಖರ್ಗೆ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆರ್.ಎಸ್.ಎಸ್. ನೋಂದಣಿ ಮತ್ತಿತರ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಸರ್ಕಾರದ ಹೊಣೆಗಾರಿಕೆಯನ್ನು ಜನತೆಯಿಂದ ಮರೆಮಾಚಲು ಮುಂದಾಗಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ 12 ವರ್ಷಗಳ ದೀರ್ಘ ಅವಧಿಯಲ್ಲಿ ಸಮರ್ಥ ಅಧಿಕಾರ ನಡೆಸುತ್ತಾ ವಿಶ್ವದಲ್ಲಿಯೇ ಗಮನ ಸೆಳೆದಿದ್ದಾರೆ. ಅನೇಕ ಬಗೆಯ ಯೋಜನೆಗಳನ್ನು ಜನತೆಯ, ಅದರಲ್ಲೂ ಬಡವರ ಏಳಿಗೆಗಾಗಿ ರೂಪಿಸಿ ಸಮಾನತೆಯ ಬೆಳಕು ಪ್ರಜ್ವಲಿಸುವಂತೆ ಮಾಡುತ್ತಿದ್ದಾರೆ. ವಿಶ್ವದಲ್ಲೇ ಶ್ರೇಷ್ಠ ನಾಯಕ ಎಂದು ನರೇಂದ್ರ ಮೋದಿ ಹೆಸರು ಗಳಿಸಿರುವುದು ಕಾಂಗ್ರೆಸ್ಸಿನ ಹೀನ ಮನಸ್ಸಿನ ನಾಯಕರಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದನ್ನು ತೋರಿಸಿಕೊಳ್ಳಲು ಮುಂದಾಗದೇ ಅನೇಕ ಯೋಜನೆಗಳ ಜಾರಿಗೆ ಅನಗತ್ಯ ನಿಯಮಗಳನ್ನು ತರುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿಯು ರಾಜ್ಯದ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಪಕ್ಷವಾಗಿ ಹೊರಹೊಮ್ಮಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಿಲ್ಲ:


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೆಯೇಂದ್ರ ಪಕ್ಷವನ್ನು ಸದೃಢವಾಗಿ ಸಂಘಟಿಸುತ್ತಿದ್ದಾರೆ. ಇವರ ಈ ಪರಿಯ ಕಾರ್ಯ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ. ವಿಜಯೇಂದ್ರ ಅವರನ್ನು ಬದಲಾಯಿಸುವ ಯಾವುದೇ ಕಾರ್ಯ ದೆಹಲಿಯ ವರಿಷ್ಠರ ಚಿಂತನೆಯಲ್ಲಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ದೆಹಲಿಯಲ್ಲಿ ಯಾವುದೇ ಬಗೆಯ ಲಾಬಿ ನಡೆಸಿಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು.

ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ್ ಕಾಮಶೆಟ್ಟಿ, ಮುಖಂಡರಾದ ಸೂರ್ಯ ಪಾಪಣ್ಣ, ವಕೀಲ ಮರುಳಸಿದ್ದಪ್ಪ, ದುರುಗೇಶ, ಲೋಕೇಶ, ಸಿದ್ದೇಶ ಇದ್ದರು.