ಪ್ರಿಯಾಂಕ್‌ ಖರ್ಗೆ, ಗೃಹ ಸಚಿವರಾದ ಬಳಿಕ ಆರೆಸ್ಸೆಸ್‌ನ ಕಾನೂನಾತ್ಮಕ ಸ್ಥಾನಮಾನ, ಆಸ್ತಿ, ದೇಣಿಗೆ, ತೆರಿಗೆ ಪಾವತಿ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ಕೇಳಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

 , ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರೆಸ್ಸೆಸ್) ವಿರುದ್ಧ ನಿರಂತರ ಪ್ರಶ್ನೆ, ಪ್ರಹಾರ ನಡೆಸಿದ್ದ ಸಚಿವ ಪ್ರಿಯಾಂಕ್‌ ಖರ್ಗೆ, ಇದೀಗ ಹೊಸ ಸರ್ಕಾರದಲ್ಲಿ ಗೃಹ ಸಚಿವರಾದ ಬಳಿಕ ಆರೆಸ್ಸೆಸ್‌ನ ಕಾನೂನಾತ್ಮಕ ಸ್ಥಾನಮಾನ, ಆಸ್ತಿ, ದೇಣಿಗೆ, ತೆರಿಗೆ ಪಾವತಿ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ಕೇಳಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸಂಘವನ್ನು ನೋಂದಾಯಿಸುವಂತೆ ಒತ್ತಾಯಿಸಿರುವ ಅವರು ದೇಣಿಗೆ, ಆದಾಯದ ಮೂಲ, ಖರ್ಚು-ವೆಚ್ಚ, ಆಸ್ತಿ ವಿವರ ಬಹಿರಂಗಪಡಿಸುವ ಮೂಲಕ ಪಾರದರ್ಶಕತೆ ಹಾಗೂ ಸಾಂವಿಧಾನಿಕ ಹೊಣೆಗಾರಿಕೆ ಎತ್ತಿ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಜೂ.13ರಂದು ಸಚಿವರು ಪತ್ರ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ರದಲ್ಲಿ ಆರೆಸ್ಸೆಸ್‌ 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ದೇಶದಲ್ಲಿ ಬಹು ವಿಸ್ತಾರವಾದ ಸಾಂಸ್ಥಿಕ ಅಸ್ತಿತ್ವ ಹೊಂದಿರುವ ಆರೆಸ್ಸೆಸ್‌ ಕಾನೂನು ಬದ್ಧ ಸಂಘಟನೆಯಾಗಿ ಅಥವಾ ವ್ಯಕ್ತಿಗಳ ಸಂಸ್ಥೆಯಾಗಿ ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಿರುವ ಹಿಂದಿನ ಕಾನೂನು ಆಧಾರಗಳನ್ನು ವಿವರಿಸಲು ಸಂಘದ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಲಾಗಿದೆ.

ಭಾರತ ಮತ್ತು ವಿದೇಶಗಳಲ್ಲಿ 60,000ಕ್ಕೂ ಹೆಚ್ಚು ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್‌ ಸಾರ್ವಜನಿಕ ಮತ್ತು ಸಾಮಾಜಿಕ ಜೀವನದಲ್ಲಿ ಬಹುದೊಡ್ಡ ಮಟ್ಟದ ಅಸ್ತಿತ್ವವನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಷ್ಟೊಂದು ಬೃಹತ್ ಗಾತ್ರ, ಪ್ರಭಾವ ಮತ್ತು ವ್ಯಾಪ್ತಿಯನ್ನು ಹೊಂದಿರುವುದರಿಂದಲೇ, ಆರ್‌ಎಸ್‌ಎಸ್ ಸಂಘಟನೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ಅನುಸರಣೆಯ ಉನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಎಸ್ಎಸ್‌ಗೆ ಏನು ಪ್ರಶ್ನೆ

ದೇಶ- ವಿದೇಶಗಳಲ್ಲಿ ನಿಮ್ಮ 60000 ಶಾಖೆಗಳಿವೆ. ಕೋಟ್ಯಂತರ ಸ್ವಯಂಸೇವಕರು ನಿಮ್ಮ ಜೊತೆ ಇದ್ದಾರೆ

ಇಷ್ಟು ದೊಡ್ಡ ಸಾಂಸ್ಥಿಕ ಅಸ್ತಿತ್ವ ಇರುವಾಗ ಇದನ್ನು ಕೇವಲ ಒಂದು ಅನೌಪಚಾರಿಕ ವ್ಯವಸ್ಥೆ ಎನ್ನಲಾಗದು

ಹೀಗಿದ್ದರೂ ಸಂಸ್ಥೆಯನ್ನು ನೊಂದಾಯಿಸದೇ ಇರುವುದು ಕಾನೂನು ಪಾಲನೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ

ಸಂಘಟನೆ ಎಷ್ಟೇ ಹಳೆಯ, ಪ್ರಭಾವಶಾಲಿಯಾಗಿದ್ದರೂ ಪರಿಶೀಲನೆಯಿಂದ ಹೊರತಾಗಿರಲು ಸಾಧ್ಯವಿಲ್ಲ

ಇದಕ್ಕೆ ಯಾವ ಕಾನೂನು ಆಧಾರಗಳಿವೆ ಎಂಬುದನ್ನು ವಿವರಿಸಲು ಪದಾಧಿಕಾರಿ ನಿಯೋಜನೆಗೆ ಕೋರುತ್ತೇವೆ