ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಬಿಜೆಪಿ ಪಾಳೆಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದರೆ ಮೂಲವೊಂದರ ಪ್ರಕಾರ, ಈ ಕುತೂಹಲಕ್ಕೆ ಕಾಂಗ್ರೆಸ್‌ನ ಒಳ ಸಂಶೋಧನೆಯಿಂದ ಉತ್ತರ ದೊರಕಿದೆ.
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಬಿಜೆಪಿ ಪಾಳೆಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದರೆ, ಬಯಕೆಗಿಂತ ಹೆಚ್ಚಿನ ಮತಗಳು ಬಂದಿದ್ದು ಎಲ್ಲಿಂದ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಉಂಟಾಗಿತ್ತು. ಮೂಲವೊಂದರ ಪ್ರಕಾರ, ಈ ಕುತೂಹಲಕ್ಕೆ ಕಾಂಗ್ರೆಸ್‌ನ ಒಳ ಸಂಶೋಧನೆಯಿಂದ ಉತ್ತರ ದೊರಕಿದೆ. ಅದು- ಬೆಳಗಾವಿ ಜಿಲ್ಲೆಯಿಂದ ಕೊಡುಗೆ ರೂಪದಲ್ಲಿ ಹೆಚ್ಚುವರಿ ಮತಗಳು ಬಂದಿವೆಯಂತೆ!
ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕೆಲ ಕಾರ್ಯತಂತ್ರ ರೂಪಿಸಿತ್ತು. ಆದರೆ, ತನ್ನ ಕಾರ್ಯತಂತ್ರ ಹಾಗೂ ನಿರೀಕ್ಷೆ ಮೀರಿ ಹೆಚ್ಚುವರಿ ಮತಗಳು ಸಂದಾಯವಾಗಿವೆ. ಈ ಮತಗಳ ಮೂಲ ಯಾವುದು ಎಂಬ ಪತ್ತೆದಾರಿಕೆಯನ್ನು ಕಾಂಗ್ರೆಸ್ ನಾಯಕತ್ವ ನಡೆಸಿದಾಗ ಅದು ಬೆಳಗಾವಿ ಜಿಲ್ಲೆಯಿಂದ ಬಯಸದೇ ಬಂದ ಭಾಗ್ಯ ಎಂಬುದು ಕಾಂಗ್ರೆಸ್ ಮೂಲಗಳ ಅಂಬೋಣ.
ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯ ಗೆಲುವಿಗಾಗಿ ಅಗತ್ಯವಿದ್ದ 4-5 ಮತಗಳಿಗಾಗಿ ಪ್ರತಿಪಕ್ಷಗಳ ಆತ್ಮಸಾಕ್ಷಿ ಮತ ಪಡೆಯಲು ಪ್ರಯತ್ನಿಸಿತ್ತು. ಆದರೆ, ನಿರೀಕ್ಷೆಗೂ ಮೀರಿ 11 ಮಂದಿ ಪ್ರತಿಪಕ್ಷಗಳ ಶಾಸಕರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಹಾಕಿದ್ದರು. ಇದು ಬಿಜೆಪಿ ವಲಯದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿ ಧರ್ಮಸ್ಥಳದಲ್ಲಿ ಪ್ರಮಾಣ ಪ್ರಹಸನವೂ ನಡೆದಿತ್ತು. ಬಿಜೆಪಿ ಹೈಕಮಾಂಡ್‌ಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಬಹಿರಂಗವಾಗಿ ಆತ್ಮಸಾಕ್ಷಿ ಮತ ಹಾಕಿರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಉಳಿದಂತೆ ಅಡ್ಡಮತದಾನ ಮಾಡಿದ್ದು ಯಾರು ಎಂಬುದು ತೀವ್ರ ಚರ್ಚೆಗೆ ಕಾರಣವಾಗಿತ್ತು.
ಕಾಂಗ್ರೆಸ್ ಪಾಲಿಗೆ ಇದೊಂದು ಅಭೂತ ಪೂರ್ವ ಗೆಲುವು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಬಣ್ಣಿಸಿದ್ದರು. ದೇಶಾದ್ಯಂತ ಪ್ರತಿಪಕ್ಷಗಳಿಗೆ ಬಿಜೆಪಿ ಚಳ್ಳೆಹಣ್ಣು ತಿನ್ನಿಸುತ್ತಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಮಿತ್ರಪಕ್ಷ ಜೆಡಿಎಸ್‌ಗೆ ಚಳ್ಳೆಹಣ್ಣು ತಿನ್ನಿಸಿತ್ತು. ಜತೆಗೆ, ಇದು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಯ ಗಟ್ಟಿತನದ ಬಗ್ಗೆಯೂ ಚರ್ಚೆ ಹುಟ್ಟುಹಾಕಿತ್ತು. ಮೈತ್ರಿ ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಬಿಜೆಪಿಯ ಒಳ ಹಾಗೂ ಹೊರಗೆ ಮಾತುಕತೆಗಳು ಶುರುವಾಗಿದ್ದವು.
ಇದರ ನಡುವೆ ಕಾಂಗ್ರೆಸ್ ವಲಯದಲ್ಲೂ ಈ ಬಗ್ಗೆ ಕೆಲ ಬೆಳವಣಿಗೆಗಳು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾಂಗ್ರೆಸ್‌ಗೆ ನಿರೀಕ್ಷೆಗಿಂತ ಹೆಚ್ಚು ಮತಗಳು ಪ್ರತಿಪಕ್ಷಗಳಿಂದ ಹರಿದುಬಂದಿರುವುದು ಎಲ್ಲಿಂದ ಎಂಬ ಕುತೂಹಲ ತಣಿಸಿಕೊಳ್ಳಲು ಪತ್ತೆ ಕಾರ್ಯವನ್ನು ರಾಜ್ಯ ನಾಯಕತ್ವ ನಡೆಸಿತ್ತು.
ನಾಯಕತ್ವ ಬಗ್ಗೆ ಅಸಮಾಧಾನ:
ಈ ಪತ್ತೆದಾರಿಕೆ ವೇಳೆ ತಮ್ಮ ಪಕ್ಷದ ನಾಯಕತ್ವ ಬಗ್ಗೆ ಅಸಮಾಧಾನಗೊಂಡಿರುವ ಕೆಲ ಬೆಳಗಾವಿ ಜಿಲ್ಲೆ ಶಾಸಕರು ಅಡ್ಡಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಕಾಂಗ್ರೆಸ್ ನಾಯಕತ್ವವು ಹೆಚ್ಚುವರಿ ಮತ ಗಳಿಕೆಗೆ ಬೆಳಗಾವಿ ಜಿಲ್ಲೆಯ ಯಾರನ್ನು ಕೂಡ ಸಂಪರ್ಕ ಮಾಡಿರಲಿಲ್ಲ. ಏಕೆಂದರೆ, ಈ ಮೂಲದಿಂದ ಯಾವ ಮತ ಬೀಳುವ ಸಾಧ್ಯತೆ ಇಲ್ಲ ಎಂಬುದೇ ಕಾಂಗ್ರೆಸ್ ನಾಯಕತ್ವದ ನಂಬಿಕೆಯಾಗಿತ್ತು.
ಆದರೆ, ಅಚ್ಚರಿಯೆಂಬಂತೆ ಆ ಮೂಲದಿಂದಲೇ ಮತ ಬಿದ್ದಿರುವುದರಿಂದ ಈ ವಿಚಾರದಲ್ಲಿ ಕಾಂಗ್ರೆಸ್ ಕೋರಿದ ಆತ್ಮಸಾಕ್ಷಿ ಮತಕ್ಕಿಂತ ಬೇರೆಯೇ ಕಾರಣವಿರಬಹುದು ಎಂದು ಅಂದಾಜಿಸಲಾಗಿದ್ದು, ಅದು ಬಿಜೆಪಿಯ ಆಂತರಿಕ ಒಳ ಜಗಳದ ಪರಿಣಾಮವಾಗಿ ತಮಗೆ ಲಾಭವಾಗಿದೆ ಎಂದು ಕಾಂಗ್ರೆಸ್ ನಾಯಕತ್ವ ಪರಿಭಾವಿಸಿದೆ.
- ವಿಧಾನಪರಿಷತ್ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ 5ನೇ ಅಭ್ಯರ್ಥಿ ಕಣಕ್ಕಿಳಿಸಿದ್ದ ಕಾಂಗ್ರೆಸ್
- ಆ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದ ಕಾಂಗ್ರೆಸ್ 4-5 ಮತಗಳ ನಿರೀಕ್ಷೆಯಲ್ಲಿತ್ತು
- ಆದರೆ ನಿರೀಕ್ಷೆಗೂ ಮೀರಿ ವಿಪಕ್ಷಗಳ 11 ಮತಗಳು ಬಂದಿದ್ದರಿಂದ ಪಕ್ಷದೊಳಗೆ ಭಾರೀ ಅಚ್ಚರಿ
- ಕುತೂಹಲದಿಂದ ಸಂಶೋಧನೆಗೆ ಇಳಿದ ಪಕ್ಷಕ್ಕೆ ಬೆಳಗಾವಿ ಜಿಲ್ಲೆಯಿಂದ ಮತ ಚಲಾವಣೆ ಮಾಹಿತಿ
