ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್‌ ಅಧಿಕಾರ ಗದ್ದುಗೆ ಏರಿದ ನಂತರ ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೆ ಮಾಡುವಲ್ಲಿ ಮೀನಮೇಷ ಎಣಿಸಿದ್ದಲ್ಲದೇ ಸದ್ಯ ಗ್ಯಾರಂಟಿಗಳನ್ನು ಮರುಪರಿಶೀಲನೆಗೆ ಮುಂದಾಗಿರುವುದು ಕಾಂಗ್ರೆಸ್‌ ಘೋಷಿಸಿದ್ದ ಪ್ರಣಾಳಿಕೆಯ ಮೇಲಿನ ಜನರು ನಂಬಿಕೆ ಕಳೆದುಕೊಂಡಿರುವುದು ಗ್ಯಾರಂಟಿಯಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಲೇವಡಿ ಮಾಡಿದ್ದಾರೆ.

ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, 2023ರಲ್ಲಿ ಕಾಂಗ್ರೆಸ್‌ ಸರ್ಕಾರ 200 ಯುನಿಟ್‌ ಉಚಿತ ವಿದ್ಯುತ್‌ ಘೋಷಣೆ ಮಾಡಿ ಜಾರಿಗೆ ತರುವಾಗ ಗ್ರಾಹಕರು ಕಳೆದ ವರ್ಷ ಬಳಸಿದ ಸರಾಸರಿ ಆಧಾರದ ಮೇಲೆ ಯುನಿಟ್‌ ನಿಗದಿ ಮಾಡಿ ಅದಕ್ಕೆ ಶೇ.10 ರಷ್ಟು ಹೆಚ್ಚುವರಿ ಯುನಿಟ್‌ ನೀಡುತ್ತೇನೆಂದು ಅದರಂತೆ ಮಾತ್ರ ಉಚಿತ ವಿದ್ಯುತ್‌ ನೀಡುತ್ತಿದೆ. ಘೋಷಣೆಯಂತೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಿ ಇಲ್ಲವೇ ವಾರ್ಷಿಕ ಆಧಾರದ ಮೇಲೆ ನೀಡಿದ ಶೇ.10 ರಷ್ಟು ಹೆಚ್ಚಿನ ಯುನಿಟ್‌ನ್ನು ಪ್ರತಿವರ್ಷವೂ ಹೆಚ್ಚಿಸಿ. 200 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್‌ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್‌ ನೀಡದೇ ಪೂರ್ಣಪ್ರಮಾಣದ ಹಣ ಕಟ್ಟಿಸಿಕೊಳ್ಳುತ್ತಿರುವುದು 200 ಯುನಿಟ್‌ ಉಚಿತ್‌ ವಿದ್ಯುತ್‌ ಗ್ಯಾರಂಟಿ ಘೋಷಣೆಗೆ ಏನೂ ಅರ್ಥ ಎಂದು ಕಿಡಿಕಾರಿದ್ದಾರೆ.ಸದ್ಯ ನೈಜ ಫಲಾನುಭಿಗಳಿಗೆ ಸರ್ಕಾರದ ಗ್ಯಾರಂಟಿಗಳು ತಲುಪಬೇಕು ಎನ್ನುವ ನೆಪವೊಡ್ಡಿ ಗ್ಯಾರಂಟಿಗಳ ಮರುಪರಿಷ್ಕರಣೆಗೆ ಮುಂದಾಗಿರುವ ಡಿಕೆಶಿ ಕಾಂಗ್ರೆಸ್‌ ಸರ್ಕಾರ ಆರ್ಥಿಕ ದಿವಾಳಿಗೆ ಹಿಡಿದ ಕೈಗನ್ನಡಿಯಾಗಿದೆ. ಗ್ಯಾರಂಟಿಗಳನ್ನು ಘೋಷಣೆ ಮಾಡಿ ಎರಡ್ಮೂರ ವರ್ಷಗಳು ಕಳೆದ ನಂತರ ಗ್ಯಾರಂಟಿಗಳು ದುರ್ಬಳಕೆಯಾಗುತ್ತಿವೆ ಎನ್ನುವುದಾದರೇ ರಾಜ್ಯಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ, ಜಿಲ್ಲಾ ಮತ್ತು ತಾಲೂಕುಮಟ್ಟದ ಸಮಿತಿಗಳಲ್ಲಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ನೇಮಕ ಮಾಡಿ ಆರ್ಥಿಕ ಇಲಾಖೆಯಿಂದ ಗೌರವಧನ ಮತ್ತು ಸಭಾ ಭತ್ಯೆ ನೀಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಸಿಎಂ ಡಿ.ಕೆ.ಶಿವಕುಮಾರ ಅಧಿಕಾರ ಸ್ವೀಕರಿಸಿ ಅಂದೇ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ ಎದುರಾಗುತ್ತಿದ್ದ ತೊಂದರೆ ನಿವಾರಣೆಗೆ ಮಹತ್ವದ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯದು. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯಲು ವಿನಾಯತಿ ನೀಡಿರುವುದನ್ನು ರೈತ ಭಾರತ ಪಕ್ಷ ಸ್ವಾಗತಿಸುತ್ತದೆ. ಆದರೆ, ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಒದಗಿಸಲು ಒಂದು ಬಾರಿಯ ವಿನಾಯತಿ ನೀಡಿರುವುದು ಹಾಗೂ ಜೂ.22 ರಿಂದ ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಅಧಿಕೃತ ಆದೇಶವು ಹೆಚ್ಚು ಜನರಿಗೆ ಲಾಭ ತಂದು ಕೊಡುವುದಿಲ್ಲ. ಹೀಗಾಗಿ ಕೇವಲ 15 ದಿನಗಳಿಗೆ ಮಾತ್ರ ವಿಸ್ತರಿಸದೇ ಹಾಗೆ ಮುಂದುವರೆಯಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ವಿದ್ಯುತ್‌ ವಿತರಣಾ ವ್ಯವಸ್ಥೆ ಖಾಸಗಿ ಕಂಪನಿಗಳಿಗೆ ವಹಿಸಲು ಮುಂದಾಗಿರುವುದು ರೈತರ, ಕಾರ್ಮಿಕರ ಹಾಗೂ ವಿದ್ಯುತ್ ಗ್ರಾಹಕರಲ್ಲಿ ತೀವ್ರ ಆತಂಕವುಂಟು ಮಾಡಿದೆ. ಖಾಸಗೀಕರಣದಿಂದ ಗ್ರಾಮೀಣ ಪ್ರದೇಶದ ರೈತರಿಗೆ ನೀಡುವ ಸಬ್ಸಿಡಿ ಹಾಗೂ ವಿವಿಧ ಸೌಲಭ್ಯಗಳ ಕುರಿತು ಸರ್ಕಾರ ಸ್ಪಷ್ಟ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಬೇಕು. ಸದ್ಯ ವಿದ್ಯುತ್‌ ಮಂಡಳಿ ಯಾವುದೇ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿಲ್ಲ. ಪ್ರತಿಯೊಂದಕ್ಕೂ ದುಡ್ಡು ನೀಡಿಯೇ ಪಡೆಯಬೇಕೆಂಬಂತಾಗಿದೆ. ಮುಂದೆ ಖಾಸಗೀಕರಣವಾದರೂ ಸದ್ಯದ ಪರಿಸ್ಥಿತಿಗಿಂತ ಭಿನ್ನವಾಗುವುದಿಲ್ಲ. ಖಾಸಗೀಕರಣದಿಂದ ಸಾರ್ವಜನಿಕ ಹಿತಕ್ಕಿಂತ ಲಾಭದ ಉದ್ದೇಶ ಹೆಚ್ಚಾಗಿ ಸೇವಾ ಗುಣಮಟ್ಟ ಕುಸಿಯುವುದರ ಜತೆಗೆ ವಿದ್ಯುತ್ ಬಿಲ್‌ಗಳು, ಸೇವಾ ಶುಲ್ಕಗಳು ಹೆಚ್ಚಾಗಿ ಗ್ರಾಹಕರಿಗೆ ಹೆಚ್ಚುವರಿ ಭಾರ ಬೀಳಲಿದೆ.


-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ ಕರ್ನಾಟಕ.