ಹನೂರು : ಅರಣ್ಯ ಸಿಬ್ಬಂದಿಯ ಎನ್‌ಕೌಂಟರ್‌ಗೆ ಮೂವರು ಹತರಾದ ಘಟನೆಗೆ ಹನೂನು ತಾಲೂಕಿನ ಜನರು ಆಕ್ರೋಶಗೊಂಡು ಅರಣ್ಯ ಇಲಾಖೆಯ 3 ಕಚೇರಿ, ಸಿಬ್ಬಂದಿ ಮನೆಗಳು, ವಿಶ್ರಾಂತಿ ಗೃಹ (ಐಬಿ)ಗಳಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಶಾಗ್ಯದ ಡಿಆರ್‌ಎಫ್ ಕಚೇರಿ, ಪಕ್ಕದಲ್ಲಿದ್ದ ಅರಣ್ಯ ಸಿಬ್ಬಂದಿಯ ಮನೆ, ಕಳ್ಳಿ ದೊಡ್ಡಿ ಬಳಿಯ ಕಳ್ಳಬೇಟೆ ತಡೆ ಶಿಬಿರ, ಕಳ್ಳಿದೊಡ್ಡಿಯಿಂದ ಸುಮಾರು ಒಂದೂವರೆ ಕಿ.ಮೀ. ದೂರವಿರುವ ಕಾವೇರಿ ನದಿ ಸಮೀಪದ ಐಬಿ ಮತ್ತು ಪಕ್ಕದ ಅರಣ್ಯ ಸಿಬ್ಬಂದಿಯ 2 ಮನೆಗಳನ್ನು ಉದ್ರಿಕ್ತರ ಹಾಳುಗೆಡವಿದ್ದಾರೆ. ಅಲ್ಲಿನ ಶೌಚಾಲಯದ ಕಮೋಡ್‌ಗಳು, ವಾಷ್ ಬೇಸನ್, ಪೀಠೋಪಕರಣ, ಕುರ್ಚಿ, ಬೆಂಚ್‌ಗಳನ್ನು ಧ್ವಂಸ ಮಾಡಿದ್ದಾರೆ.
ಮತ್ತೊಂದೆಡೆ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅರಣ್ಯ ಇಲಾಖೆ ಕಚೇರಿ ಮುಂಭಾಗ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು, ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಮೃತರು ಅಮಾಯಕರು, ಅವರನ್ನು ಪ್ರತಿದಾಳಿಯ ನೆಪದಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕೆಂದು ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.
ವಾಹನ ತಡೆದು ಪ್ರತಿಭಟನೆ:
ಗುಂಡಿನ ದಾಳಿಯಿಂದಾಗಿ ರೊಚ್ಚಿಗೆದ್ದ ಸ್ಥಳೀಯರು, ‘ತಪ್ಪಿತಸ್ಥರನ್ನು ಸ್ಥಳಕ್ಕೆ ಕರೆಸುವಂತೆ ಮತ್ತು ಅಮಾಯಕರನ್ನು ಕೊಂದಿರುವ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೊತೆಗೆ ವಾಹನ ತಡೆದು ಆಕ್ರೋಶ ಹೊರಹಾಕಿ ಸಂಚಾರಕ್ಕೆ ತಡೆಒಡ್ಡಿದರು.
ಅರಣ್ಯ ಕಚೇರಿಗೆ ನುಗ್ಗಲೆತ್ನ:
ಉದ್ರಿಕ್ತರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಬಳಿಕ ಅರಣ್ಯ ಇಲಾಖೆ ಕಚೇರಿ ಗೇಟ್ ಬೀಗ ಜಡಿದು ಒಳಗಡೆ ಅಧಿಕಾರಿಗಳ ಕಚೇರಿಗೆ ಒಳ ನುಗ್ಗಲು ಯತ್ನಿಸಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ಕಾರಣ ಅನಾಹುತ ತಪ್ಪಿದೆ. ಗುಂಡೇಟಿಗೆ ಬಲಿಯಾದವರ ಭಾವಚಿತ್ರಗಳನ್ನು ಹಿಡಿದು ಕುಟುಂಬಸ್ಥರು ಭಾರಿ ಆಕ್ರೋಶ ಹೊರಹಾಕಿದರು. ಜೊತೆಗೆ ತಮ್ಮವರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
