ಸೀಡ್ಸ್ ಆಫ್ ಕೇರ್ ಫೌಂಡೇಶನ್ ಬೆಂಗಳೂರು ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರಾಣಿಬೆನ್ನೂರು ಇವರ ಸಹಯೋಗದಲ್ಲಿ ಆಂಗ್ಲೋ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು.

ರಟ್ಟಿಹಳ್ಳಿ: ಸೀಡ್ಸ್ ಆಫ್ ಕೇರ್ ಫೌಂಡೇಶನ್ ಬೆಂಗಳೂರು ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರಾಣಿಬೆನ್ನೂರು ಇವರ ಸಹಯೋಗದಲ್ಲಿ ಆಂಗ್ಲೋ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು.

ರಟ್ಟಿಹಳ್ಳಿ ತಾಲೂಕಿನ ಗುಡ್ಡದ ಮಾದಾಪುರ ಗ್ರಾಮದ ಸುಮಾರು 3 ಸಾವಿರ ಎಕರೆ ಅರಣ್ಯ ಪ್ರದೇಶಕ್ಕೆ ಮಕ್ಕಳನ್ನು ಕರೆದೊಯ್ದು ಅರಣ್ಯ, ಸಸ್ಯಸಂಪತ್ತು, ವನ್ಯಜೀವಿಗಳು ಹಾಗೂ ಹವಾಮಾನ ಬದಲಾವಣೆಯ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಸಿದ್ದೇಶ್ವರ ಗ್ರಾಮ ಅರಣ್ಯ ಸಮಿತಿ ಸದಸ್ಯರು ಮಾತನಾಡಿ, ಗುಡ್ಡದ ಮಾದಾಪುರದಲ್ಲಿ ಹಿಂದೆ ಅರಣ್ಯ ನಾಶವಾಗಿದ್ದ ಪರಿಸ್ಥಿತಿ ಹಾಗೂ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಸಹಕಾರದಿಂದ ಅರಣ್ಯವನ್ನು ಪುನರುಜ್ಜೀವನಗೊಳಿಸಿ ಸಂರಕ್ಷಿಸಿದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಹೈದರಾಬಾದ್‌ನ ಡಾ. ಪರಮೇಶಪ್ಪ ಕಾಗಿನೆಲ್ಲಿ ಮಾತನಾಡಿ, ಅರಣ್ಯ ಸಂರಕ್ಷಣೆಯಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಸುಧಾರಿಸಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿ ಗ್ರಾಮಸ್ಥರ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದೆ ಎಂದರು.

ಡಾ. ಷಣ್ಮುಖಪ್ಪ ಕಾಗಿನೆಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ವಿಷಯಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡುವ ಮೂಲಕ ಜ್ಞಾನ ವಿಸ್ತರಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಪ್ರಾಯೋಗಿಕ ಅನುಭವವೂ ಅಗತ್ಯ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕನಿಷ್ಠ ಒಂದು ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಸ್.ಡಿ. ಬಳಿಗಾರ್ ಮಾತನಾಡಿ, ಗ್ರಾಮ ಅರಣ್ಯ ಸಮಿತಿ ಸಾಮಾಜಿಕ ಬೇಲಿಯಂತೆ ಕಾರ್ಯನಿರ್ವಹಿಸಿ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಸೌಲಭ್ಯ ಕಲ್ಪಿಸುವ ಮೂಲಕ ಉರುವಲಿಗಾಗಿ ಅರಣ್ಯ ನಾಶವಾಗುವುದನ್ನು ತಡೆಯಲಾಗಿದೆ. ಅರಣ್ಯ ಮತ್ತು ನೀರು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಗುಡ್ಡದ ಮಾದಾಪುರದ ಅರಣ್ಯ ಸಂರಕ್ಷಣಾ ಮಾದರಿಯನ್ನು ಜಿಲ್ಲೆಯ ವಿವಿಧ ಗ್ರಾಮಗಳಲ್ಲೂ ಅಳವಡಿಸಿಕೊಂಡು ಗ್ರಾಮ ಅರಣ್ಯ ಸಮಿತಿಗಳು ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಎಂ.ಎಂ. ಮೈದುರ, ಡಾ. ಎಲ್.ಎಂ. ಪೂಜಾರ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕರಬಸಪ್ಪ ಬಸಪ್ಪ ಕಾಗಿನೆಲ್ಲಿ, ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.