ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ 15 ದಿನಗಳ ವನಮಹೋತ್ಸವ ಆಚರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಹೇಳಿದರು.
ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕಳೆದ ೧೨ ವರ್ಷಗಳಿಂದ ಶೈಕ್ಷಣಿಕವಾಗಿ, ಬೌದ್ಧಿಕ ಮತ್ತು ಭೌತಿಕವಾಗಿ ಕೆಲಸ-ಕಾರ್ಯಗಳನ್ನು ಮಾಡುತ್ತ ಬಂದಿದೆ. ಇದು ಪ್ರಪಂಚದ ಏಕೈಕ ವಿಶ್ವವಿದ್ಯಾಲಯವಾಗಿದೆ. ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಶಿಷ್ಟವಾಗಿದೆ. ಪಾರಂಪರಿಕ ಜ್ಞಾನಗಳನ್ನು ದಾಖಲಿಸುವುದು, ಸಂರಕ್ಷಿಸುವುದು ಹಾಗೂ ಜನತೆಗೆ ಪ್ರಸಾರ ಮಾಡುವುದು ಮುಖ್ಯ ಗುರಿಯಾಗಿದೆ ಎಂದರು.
ಕುಲಪತಿ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಆವರಣ ಹಸಿರುಕರಣ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇದುವರೆಗೆ ಸುಮಾರು 24 ಸಾವಿರ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ವಿಶ್ವವಿದ್ಯಾಲಯದ ಆವರಣ ಹಸಿರುಕರಣಗೊಳಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಹೊಸ ಆಯಾಮ ನೀಡಲಾಗಿದೆ ಎಂದರು.ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ. ಲತೀಪ್ ಕುನ್ನಿಬಾವಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ತಾಪಮಾನ ನೋಡಿದರೆ ಹಸಿರು ಉಸಿರಾಗಬೇಕಾಗಿರುವುದು ಅಗತ್ಯವಾಗಿದೆ. ಪರಿಸರ ಉಳಿಸಿ, ಕಾಪಾಡಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳು, ಶಿಕ್ಷಕರು, ನಾಗರಿಕರು ಹಸಿರಿನ ಬಗ್ಗೆ ಕಾಳಜಿ ವಹಿಸಬೇಕು ಎಂದರು.