ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಒಡೆಯರ್ ಅವರು ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪಿಸುವುದರ ಜೊತೆಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿಗೆ ತಂದು ವಯಸ್ಕರಿಗಾಗಿ ಶಾಲೆ ಆರಂಭಿಸಿದರು ಎಂದರು.
ಪ್ರಜೆಗಳ ಸಮಸ್ಯೆ ಆಲಿಸಲು ಪ್ರಜಾಪ್ರತಿನಿಧಿ ಸಭೆ ಬಲಗೊಳಿಸಿ, ನ್ಯಾಯವಿಧಾಯಕ ವ್ಯವಸ್ಥೆ ಸ್ಥಾಪಿಸಿದರು. ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಯಾವಾಗಲು ಹೆಚ್ಚಾಗಿತ್ತು. ಮೈಸೂರಿನಲ್ಲಿ ನಡೆದ ಮೀಸಲಾತಿ ಚಳುವಳಿ, ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದಾಗಿತ್ತು. ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ, ಬ್ರಾಹ್ಮಣೇತರರಿಗೆ ಶೇ.75 ರಷ್ಟು ಮೀಸಲಾತಿ ನೀಡಿ ಹೊಸ ಶಕೆಗೆ ಮುನ್ನುಡಿಯನ್ನಿಟ್ಟರು. ತಮ್ಮ ಕಾಲಾವಧಿಯನ್ನು ದೇವದಾಸಿ ಪದ್ದತಿ ನಿರ್ಮೂಲನೆ, ಗೆಜ್ಜೆಪೂಜೆ ಕಾರ್ಯಕ್ರಮ ನಿಷೇಧ, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹ, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದರೆಂದು ಸ್ಮರಿಸಿದರು.ಮಡಿವಾಳ ಗುರುಪೀಠದ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತು ಎಷ್ಟು ನಿಜವೋ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡದ ಕ್ಷೇತ್ರವೇ ಇಲ್ಲ ಅನ್ನೋದು ಅಷ್ಟೇ ಸತ್ಯ. ಮೈಸೂರಿನ ಸುವರ್ಣ ಯುಗಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾದರು. ಅಂದು ರಾಜರು ಇಂದು ರಾಜಕಾರಣಿಗಳು ಜನರನ್ನು ಆಳುತ್ತಿದ್ದಾರೆ. ಜನನಾಯಕ ಅಂದ್ರೆ ಒಡೆಯರ್ ರೀತಿಯಲ್ಲಿ ಇರಬೇಕು. ಜಗತ್ತಿಗೆ ತೋರಿಸಿಕೊಟ್ಟ ಇವರ ಕೊಡುಗೆಗಳು ಅಜರಾಮರ ಎಂದು ಹೇಳಿದರು.
ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಬ್ಬರು. ಇಂದು ರಾಜ್ಯ ರಾಜಧಾನಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಬೆಂಗಳೂರು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಯುವಜನರು ಉದ್ಯೋಗಾವಕಾಶಗಳನ್ನು ಅರಸುವಾಗ ಅವರ ಮನಸ್ಸಿನಲ್ಲಿ ಮೊದಲಿಗೆ ಬೆಂಗಳೂರಿನ ಹೆಸರು ಮೂಡುತ್ತದೆ. ಈ ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ. ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ. ಈ ಎಲ್ಲವೂ ಮೈಸೂರಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿದ ಅಡಿಪಾಯವೆಂದರು.