15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

KannadaprabhaNewsNetwork |  
Published : Apr 03, 2026, 02:15 AM IST
ಫೋಟೋ : ೨ಕೆಎಂಟಿ_ಎಪಿಆರ್_ಕೆಪಿ೩ : ಯಲವಳ್ಳಿಯಲ್ಲಿ ಕಾಳಿಂಗ ಸರ್ಪ ಸಂರಕ್ಷಣೆಯಲ್ಲಿ ಪವನ ನಾಯ್ಕ.(ಫೋಟೋ ನೆರವು : ದೀಪ್ ಕೊಡಿಯಾ) | Kannada Prabha

ಸಾರಾಂಶ

ತಾಲೂಕಿನ ಯಲವಳ್ಳಿಯಲ್ಲಿ ಕಂಡು ಬಂದ ಅತಿಭಾರದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞ ಪವನ ನಾಯ್ಕ ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಮಟಾ

ತಾಲೂಕಿನ ಯಲವಳ್ಳಿಯಲ್ಲಿ ಕಂಡು ಬಂದ ಅತಿಭಾರದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞ ಪವನ ನಾಯ್ಕ ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಯಲವಳ್ಳಿಯ ಲಕ್ಷ್ಮೀನಾರಾಯಣ ಹೆಗಡೆ ಅವರ ಮನೆಯ ತೋಟದಲ್ಲಿ ೫ ದಿನಗಳ ಹಿಂದೆ ಎರಡು ಕಾಳಿಂಗಗಳು ಸೆಣಸಾಡುತ್ತಿದ್ದು, ನಂತರ ದೊಡ್ಡ ಕಾಳಿಂಗ ಸರ್ಪವು ಸಣ್ಣ ಕಾಳಿಂಗ ಸರ್ಪವನ್ನು ನುಂಗಿತ್ತು. ಬಳಿಕ ಸರ್ಪವು ತೋಟ ಬಿಟ್ಟು ಕದಲದೇ ಅಲ್ಲಿಯೇ ಠಿಕಾಣಿ ಹೊಡೆದಿತ್ತು. ಜನರು ತೋಟದಲ್ಲಿ ಓಡಾಡುವಾಗ ಪದೇ ಪದೇ ಕಾಣಿಸುತ್ತಿದ್ದರಿಂದ ಭಯದಿಂದ ತೋಟದ ಕೆಲಸವೂ ನಿಂತಿತ್ತು.

ಈ ಬಗ್ಗೆ ಮಾಹಿತಿ ಪಡೆದ ಉರಗ ತಜ್ಞ ಪವನ ನಾಯ್ಕ, ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ವಿವರಿಸಿದ ಪವನ ನಾಯ್ಕ, ಯಲವಳ್ಳಿಯಲ್ಲಿ ಹಿಡಿದ ಕಾಳಿಂಗ ಸರ್ಪವು ಬರೋಬ್ಬರಿ ೧೫ ಅಡಿ ಉದ್ದವಿದ್ದು, ೧೧.೩೪೦ ಕೆಜಿ ತೂಕವಿತ್ತು. ಇಷ್ಟು ಭಾರವಾದ ಕಾಳಿಂಗ ಸರ್ಪ ಇದೂವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇರೆಲ್ಲಿಯೂ ಕಂಡು ಬಂದ ದಾಖಲೆ ಇಲ್ಲ. ಕಳೆದ ವರ್ಷ ಆಗುಂಬೆಯಲ್ಲಿ ೧೨.೭೫೦ ಕೆಜಿ ಭಾರದ ಕಾಳಿಂಗ ಸಿಕ್ಕಿದ್ದು, ಭಾರತದಲ್ಲಿಯೇ ಅತೀ ಭಾರವಾದ ಕಾಳಿಂಗವಾಗಿತ್ತು. ಇದು ಅವರ ೧೬ ವರ್ಷಗಳ ಉರಗ ಸಂರಕ್ಷಣಾ ಕಾರ್ಯಾವಧಿಯಲ್ಲಿ ೧೦೦ ನೇ ಕಾಳಿಂಗ ರಕ್ಷಣೆಯಾಗಿದೆ ಎಂದು ತಿಳಿಸಿದ್ದಾರೆ.ಕಳ್ಳತನವಾಗಿ ೨೪ ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಪೊಲೀಸರು

ಗೋಕರ್ಣ ಸಮೀಪದ ಹಿರೇಗುತ್ತಿಯ ಬ್ರಹ್ಮಜಟಕ ದೇವಾಲಯದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾದ ೨೪ ಗಂಟೆಯೊಳಗೆ ಆರೋಪಿಯನ್ನ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಐತಿಹಾಸಿಕ ಮಂದಿರದ ಕಾಣಿಕೆ ಹುಂಡಿ ಕಳ್ಳತನವಾಗಿತ್ತು. ಗುರುವಾರ ಮುಂಜಾನೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಪಿಎಸ್‌ಐ ಅನಿಲ್ ಬಿ.ಎಂ., ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ, ರವಿ ಗುಡ್ಡಿ, ಸಿಬ್ಬಂದಿಗಳಾದ ಲೋಕೇಶ್ ಅರಶಿನಗುಪ್ಪಿ, ದಯಾನಂದ ನಾಯ್ಕ, ರಾಜೇಶ್ ಎಚ್. ನಾಯ್ಕ, ಪ್ರದೀಪ್ ನಾಯ್ಕ(ಸಿಎಸ್ಪಿ ಕುಮಟಾ), ಪರಮೇಶ್ವರ ಬೆಂಡ್ಲಗಟ್ಟಿ, ಕಿರಣ್ ಬಾಳೂರ, ಮಣಿಕಂಠ ಗೌಡ ಪರಮೇಶ್ವರ ಲಮಾಣಿ ಸೇರಿದಂತೆ ಎರಡು ಠಾಣೆಯವರು ಜಂಟಿ ಕಾರ್ಯಚರಣೆಯ ಮೂಲಕ ಆರೋಪಿತನನ್ನು ಹೆಡೆಮುರಿ ಕಟ್ಟಿದ್ದಾರೆ.

ಹೊನ್ನಾವರ ಕಡತೋಕದ ಗಣೇಶ ಗೋಪಾಲ ದೇಶಭಂಡಾರಿ(೩೬) ಆರೋಪಿತನಾಗಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಪ್ತು ಸ್ಥಗಿತ, ಗಿಡದಲ್ಲಿಯೇ ಕೊಳೆಯುತ್ತಿರುವ ಪಪ್ಪಾಯಿ ಹಣ್ಣು!
ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ